ರಾಜ್ಯದಲ್ಲಿ ಸ್ಪಾ, ಮಸಾಜ್ ಕೇಂದ್ರ, ಬ್ಯೂಟಿ ಪಾರ್ಲರ್, ಯುನಿಸೆಕ್ಸ್ ಸೆಲೂನ್‌ಗಳು ಹಾಗೂ ಜಿಮ್ಮೇಶಿಯಂಗಳ ನಿಯಂತ್ರಣಕ್ಕಾಗಿ ಪ್ರತ್ಯೇಕ ಕಾನೂನು ಜಾರಿಗೆ ಕರ್ನಾಟಕ ಕಾನೂನು ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಮಂಗಳೂರಿನ ನಿವೃತ್ತ ಸರ್ಕಾರಿ ವಕೀಲ ಮನೋರಾಜ್ ರಾಜೀವ್ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದ ಆಯೋಗ ತನ್ನ 76ನೇ ವರದಿಯಲ್ಲಿ ಈ ಶಿಫಾರಸು ನೀಡಿದೆ. ಪ್ರಸ್ತುತ ಇಂತಹ ಕೇಂದ್ರಗಳ ಕಾರ್ಯನಿರ್ವಹಣೆಯನ್ನು ನೇರವಾಗಿ ನಿಯಂತ್ರಿಸುವ ಸ್ಪಷ್ಟ ಕಾನೂನು ಇಲ್ಲ.
ಆಯೋಗ ದೇಶ-ವಿದೇಶಗಳ ಕಾನೂನು ಮಾದರಿಗಳನ್ನು ಅಧ್ಯಯನ ನಡೆಸಿದೆ. ಸಿಂಗಾಪುರ, ಅಮೆರಿಕದ ಹಲವು ರಾಜ್ಯಗಳು ಹಾಗೂ ಫಿಲಿಪೈನ್ಸ್‌ನಲ್ಲಿ ಜಾರಿಯಲ್ಲಿರುವ ನಿಯಮಾವಳಿಗಳನ್ನು ಪರಿಶೀಲಿಸಿದೆ. ಕಾನೂನು ಆಯೋಗ 2024ರ ಕಾಯ್ದೆಯೊಂದಕ್ಕೆ ತಿದ್ದುಪಡಿ ತಂದು ಕಡ್ಡಾಯ ಪರವಾನಗಿ ವ್ಯವಸ್ಥೆ ಜಾರಿಗೆ ಶಿಫಾರಸು ಮಾಡಿದೆ. ಪರವಾನಗಿ ಷರತ್ತುಗಳನ್ನು ಉಲ್ಲಂಘಿಸಿದರೆ 10 ಸಾವಿರ ರೂ. ವರೆಗೆ ದಂಡ ಹಾಗೂ ಮರು ಉಲ್ಲಂಘನೆಯಾದರೆ ಪರವಾನಗಿ ರದ್ದುಪಡಿಸುವ ಅಧಿಕಾರವನ್ನು ಸ್ಥಳೀಯ ಆಡಳಿತಕ್ಕೆ ನೀಡುವಂತೆ ಸಲಹೆ ನೀಡಲಾಗಿದೆ.
ಸ್ಪಾ ಕೇಂದ್ರಗಳಲ್ಲಿ ಲೈಂಗಿಕ ಚಟುವಟಿಕೆ ಸಂಪೂರ್ಣ ನಿಷೇಧವಾಗಿರಲಿದೆ. ಪುರುಷ ಮತ್ತು ಮಹಿಳೆಯರ ವಿಭಾಗಗಳನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು. ಗ್ರಾಹಕರ ಗುರುತಿನ ಚೀಟಿ ದಾಖಲೆ ಕಡ್ಡಾಯವಾಗಿದ್ದು, ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಕನಿಷ್ಠ 3 ತಿಂಗಳು ದೃಶ್ಯಾವಳಿಗಳನ್ನು ಸಂರಕ್ಷಿಸಬೇಕು. ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಮಾತ್ರ ಕಾರ್ಯಾಚರಿಸಬೇಕು. ಮಸಾಜ್ ಸೇವೆ ನೀಡುವ ಸಿಬ್ಬಂದಿ ಮಾನ್ಯತೆ ಪಡೆದ ಪ್ರಮಾಣಪತ್ರ ಅಥವಾ ಡಿಪ್ಲೊಮಾ ಹೊಂದಿರುವುದು ಕಡ್ಡಾಯವಾಗಲಿದೆ. ಮಾಲೀಕರು ಹಾಗೂ ಸಿಬ್ಬಂದಿಗೆ ಪೊಲೀಸ್ ಪರಿಶೀಲನೆ ಮತ್ತು ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಅಗತ್ಯವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.


