ಶಿವಮೊಗ್ಗ | ದುಡಿಮೆ ಇಲ್ಲದೆ ಹಣ ಸಂಪಾದಿಸುವ ಪ್ರವೃತ್ತಿ ಹೆಚ್ಚುತ್ತಿದೆ : ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಬೇಸರ

ಶಿವಮೊಗ್ಗ

ಶಿವಮೊಗ್ಗ,ಮಹಾತ್ಮ ಗಾಂಧೀಜಿ ಅವರು ‘ದುಡಿಮೆ ರಹಿತ ಸಂಪತ್ತು’ ಸೇರಿದಂತೆ ಸಮಾಜದ ಅನಿಷ್ಠಗಳ ಕುರಿತು ಎಚ್ಚರಿಕೆ ನೀಡಿದ್ದರು. ಆದರೆ ಇಂದು ದುಡಿಮೆ ಇಲ್ಲದೆ ಹಣ ಸಂಪಾದಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ವಿಧಾನ ಪರಿಷತ್‌ನ ಸಭಾಧ್ಯಕ್ಷರಾಗಿದ್ದ ದಿವಂಗತ ಎಚ್.ಎಸ್. ರುದ್ರಪ್ಪ ಅವರ ಸವಿನೆನಪು ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣದಲ್ಲಿ ಅವರು ದೀಪ ಬೆಳಗಿ ಉದ್ಘಾಟಿಸಿ‌ ಮಾತನಾಡಿದರು.

ರೈತ ಹೋರಾಟಕ್ಕೆ ರುದ್ರಪ್ಪ ಕೊಡುಗೆ ಮತ್ತು ಅವರ ಸ್ಮರಣೆ ಕುರಿತು ಮಹಾಸ್ವಾಮಿಗಳು, ಎಚ್.ಎಸ್. ರುದ್ರಪ್ಪ ಹಾಗೂ ಎನ್.ಡಿ. ಸುರೇಶ್ ಅವರು ಹುಟ್ಟುಹಾಕಿದ ರೈತ ಸಂಘದ ಹೋರಾಟವು ಸ್ವಾತಂತ್ರ್ಯ ಹೋರಾಟದ ಆಶಯಗಳನ್ನು ನೆನಪಿಸುವಂತಹ ಹೋರಾಟವಾಗಿದೆ ಎಂದು ಹೇಳಿದರು.ರೈತರ ಹಕ್ಕುಗಳಿಗಾಗಿ ನಡೆದ ಹೋರಾಟದ ಸಂದರ್ಭದಲ್ಲಿ ರುದ್ರಪ್ಪ ಅವರು ಹಲವು ರೀತಿಯ ಒತ್ತಡ ಹಾಗೂ ಬೆದರಿಕೆಗಳನ್ನು ಎದುರಿಸಿದ್ದರು. ಅವರನ್ನು ಗುರಿಯಾಗಿಸಿಕೊಂಡು ಜೀವಕ್ಕೆ ಅಪಾಯ ಉಂಟುಮಾಡುವ ಹಂತಕ್ಕೂ ಪರಿಸ್ಥಿತಿ ತಲುಪಿತ್ತು ಎಂದು ಸ್ಮರಿಸಿದರು.

ಒಂದು ಕಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಅಧಿಕಾರಿಗಳು ಊರಿನ ಹಿರಿಯರ ಗಮನಕ್ಕೆ ಬಾರದೆ ಗ್ರಾಮಕ್ಕೆ ಕಾಲಿಡಲು ಸಾಧ್ಯವಿಲ್ಲ ಎಂಬ ಸಂದೇಶ ಸಾರುವ ನಾಮಫಲಕಗಳಿದ್ದವು. ರೈತ ಸಂಘದ ಹೋರಾಟವನ್ನು ರುದ್ರಪ್ಪ ಅವರು ರಾಜ್ಯದಾದ್ಯಂತ ಉತ್ತುಂಗಕ್ಕೆ ಕೊಂಡೊಯ್ದಿದ್ದರು ಎಂದು ಹೇಳಿದರು. ಸಮಾಜ ಅಧಃಪತನದತ್ತ ಸಾಗುತ್ತಿರುವುದು ಬೇಸರದ ಸಂಗತಿ. ನೀತಿ ರಹಿತ ವಾಣಿಜ್ಯ ಮತ್ತು ವ್ಯಾಪಾರ ಸಮಾಜದಲ್ಲಿ ಬೇರೂರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ.

ಆದರೆ ಆ ಬದಲಾವಣೆಯನ್ನು ಕಾರ್ಯರೂಪಕ್ಕೆ ತರಲು ಸಿದ್ಧರಿಲ್ಲದ ಮನಸ್ಥಿತಿ ಸಮಾಜದಲ್ಲಿ ಕಂಡುಬರುತ್ತಿದೆ ಎಂದು ಅವರು ಹೇಳಿದರು.ಶೀಲವಿಲ್ಲದ ಶಿಕ್ಷಣದ ಬಗ್ಗೆ ಕಳವಳಶಿಕ್ಷಣ ವ್ಯವಸ್ಥೆಯಲ್ಲಿನ ಮೌಲ್ಯಗಳ ಕುಸಿತದ ಬಗ್ಗೆಯೂ ಮಾತನಾಡಿದ ಸ್ವಾಮೀಜಿಯವರು, ‘ಶೀಲವಿಲ್ಲದ ಶಿಕ್ಷಣ’ದ ಪರಿಣಾಮಗಳು ಸಮಾಜದ ಮೇಲೆ ಬೀರುತ್ತಿವೆ ಎಂದು ಅಭಿಪ್ರಾಯಪಟ್ಟರು.

ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಗೆ ಸಂಬಂಧಿಸಿದ ಅವಾಂತರಗಳು ಹಾಗೂ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳನ್ನೂ ಅವರು ಪ್ರಸ್ತಾಪಿಸಿದರು. ಶಿಕ್ಷಣವು ಕೇವಲ ಉದ್ಯೋಗ ಅಥವಾ ಆರ್ಥಿಕ ಪ್ರಗತಿಗೆ ಸೀಮಿತವಾಗದೆ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಂತಿರಬೇಕು ಎಂದು ಹೇಳಿದರು.ಅದೇ ರೀತಿ ತ್ಯಾಗವಿಲ್ಲದ ಪೂಜೆ, ಮಾನವೀಯತೆ ಇಲ್ಲದ ಧರ್ಮ ಮತ್ತು ಮೌಲ್ಯಗಳನ್ನು ಕೇವಲ ಮಾತನಾಡುವ ಪ್ರವೃತ್ತಿ ಹೆಚ್ಚಾಗಿದೆ. ಮನುಷ್ಯ ಇವುಗಳ ಬಗ್ಗೆ ಕೇಳಿ ಸಂತೋಷಪಡುತ್ತಿದ್ದಾನೆಯೇ ಹೊರತು, ಅವುಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗುತ್ತಿಲ್ಲ ಎಂದು ವಿಷಾದಿಸಿದರು.

ರೈತ ಹೋರಾಟದ ಆಶಯ ಉಳಿಸಿಕೊಳ್ಳಬೇಕುಇಂದಿನ ಸಂದರ್ಭದಲ್ಲಿ ರೈತ ಸಂಘದ ಹೋರಾಟದ ಇತಿಹಾಸ ಮತ್ತು ಅದರ ಆಶಯಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ರೈತರು, ಪರಿಸರ ಹಾಗೂ ಸಮಾಜದ ಹಿತಕ್ಕಾಗಿ ನಡೆದ ಹೋರಾಟಗಳು ಕೇವಲ ನೆನಪುಗಳಾಗಿ ಉಳಿಯದೆ, ಇಂದಿನ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗದರ್ಶಿಯಾಗಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಹಿಸಿದ್ದರು. ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಳಿ, ಪರಿಸರ ತಜ್ಞ ಪ್ರೊ. ಕುಮಾರಸ್ವಾಮಿ, ಸರ್ಪರಾಜ್ ಚಂದ್ರಗುತ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ರೈತ ಹೋರಾಟದ ಇತಿಹಾಸ, ಎಚ್.ಎಸ್. ರುದ್ರಪ್ಪ ಅವರ ಹೋರಾಟದ ಬದುಕು, ಇಂದಿನ ಸಾಮಾಜಿಕ ವ್ಯವಸ್ಥೆ, ಶಿಕ್ಷಣ, ಪರಿಸರ ಹಾಗೂ ಕೃಷಿ ಕ್ಷೇತ್ರದ ಸವಾಲುಗಳ ಕುರಿತು ವಿಚಾರ ವಿನಿಮಯ ನಡೆಯಿತು.ಕಾರ್ಯಕ್ರಮಕ್ಕೂ ಮುನ್ನ ಅಶೋಕ ವೃತ್ತದಿಂದ ಅಂಬೇಡ್ಕರ್ ಭವನದವರೆಗೆ ಮೆರವಣಿಗೆ ನಡೆಸಲಾಯಿತು.

Author