ಶಿವಮೊಗ್ಗ | ಮನೆಯೊಂದು ಮೂರು ಬಾಗಿಲಾಗಿರುವ’ ಬಿಜೆಪಿಗೆ ಹೋಗಲು ನನಗೇನು ತಲೆ ಕೆಟ್ಟಿದೆಯೇ : ಶಾಸಕ ಬೇಳೂರು..?

ರಾಜಕೀಯ

ಶಿವಮೊಗ್ಗ,ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಬರಿ ಬೇಸರವಲ್ಲ, ಬದಲಾಗಿ ಅತೀವ ನೋವುಂಟಾಗಿದೆ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.

ಸಾಗರದಲ್ಲಿಂದು ಮಾತನಾಡಿರುವ ಅವರು, ​ಸಿಎಂ ಮಾತಿಗೆ ಗೌರವ ನೀಡಿ ನೋವನ್ನು ನುಂಗಿಕೊಂಡಿದ್ದೇನೆ. ಸದ್ಯ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸುತ್ತಿದ್ದೇನೆ. ಸಚಿವ ಸ್ಥಾನದ ಪಟ್ಟಿಯಲ್ಲಿ ಹೆಸರು ಇತ್ತು. ​ಕೊನೇ ಕ್ಷಣದವರೆಗೂ ನನ್ನ ಹೆಸರು ಇತ್ತು, ಆದರೆ ಕೊನೆಯದಾಗಿ ಹೆಸರು ಬದಲಾಗಿದೆ.‌ ​ಸಂಪುಟ ಸೇರ್ಪಡೆಗಾಗಿ ಕೊನೆಯ ಕ್ಷಣದವರೆಗೂ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೆ, ಆದರೆ, ಕೊನೆಯ ಘಳಿಗೆಯಲ್ಲಿ ಸಚಿವ ಸ್ಥಾನ ಕೈತಪ್ಪಲು ಕಾರಣವೇನು ಎಂಬುದು ತಿಳಿಯುತ್ತಿಲ್ಲ ಎಂದರು.

ಬಿಜೆಪಿ ಸೇರ್ಪಡೆ ಸುದ್ದಿ ಸಂಪೂರ್ಣ ಸುಳ್ಳು:

ನಾನು ಬಿಜೆಪಿ ಸೇರ್ಪಡೆ ಆಗುತ್ತೇನೆ ಎಂಬುದು ಸುಳ್ಳು. ನಾನು ಬಿಜೆಪಿ ಸೇರಲು ಕರೆ ಮಾಡಿದ್ದಕ್ಕೆ ಸೂಕ್ತ ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.​ಬಿಜೆಪಿ ಮನೆಯೊಂದು ಮೂರು ಬಾಗಿಲು ಆಗಿದೆ. ​ಬಿಜೆಪಿಯಲ್ಲಿ ಆತ್ಮೀಯರಿದ್ದಾರೆ. ಸಚಿವ ಸ್ಥಾನ ಸಿಗದಿದ್ದಾಗ ಸಾಂತ್ವನ ಹೇಳಿದ್ದಾರಷ್ಟೇ. ಆದರೆ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ, ​ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಬೆಂಬಲವಿರುವಾಗ ಬಿಜೆಪಿ ಯಾಕೆ ಹೋಗೋಣ ಎಂದು ಕೇಳಿದರು.

‘ಮನೆಯೊಂದು ಮೂರು ಬಾಗಿಲಾಗಿರುವ’ ಬಿಜೆಪಿಗೆ ಹೋಗಲು ನನಗೇನು ತಲೆ ಕೆಟ್ಟಿದೆಯೇ ಎಂದು ಮರುಪ್ರಶ್ನಿಸಿದರು? ​2028ರಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ​ಮಧು ಬಂಗಾರಪ್ಪ ಸಚಿವರಾಗಿರುವುದಕ್ಕೆ ನನ್ನದೇನೂ ಅಭ್ಯಂತರವಿಲ್ಲ ಎಂದರು.

ನಾನು ಎರಡು ತಿಂಗಳು ಕ್ಷೇತ್ರದಲ್ಲಿರಲಿಲ್ಲ ಎಂದು ಟೀಕಿಸುವ ಹಾಲಪ್ಪ, ತಾವು ಸಚಿವರಾಗಿದ್ದಾಗ 6 ತಿಂಗಳು ಜೈಲಿನಲ್ಲಿದ್ದದ್ದನ್ನು ಮರೆತಿದ್ದಾರೆ ಎಂದು ತಿರುಗೇಟು ನೀಡಿದರು.‌​ಹಿಂದೆ ತಾವೇ ಕಾಂಗ್ರೆಸ್ ಸೇರಲು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಘಟನೆ ಹಾಲಪ್ಪನವರಿಗೆ ಕನಸಿನಲ್ಲಿ ಮತ್ತೆ ಬಂದಿರಬೇಕು ಎಂದು ಹಾಲಪ್ಪನವರಿಗೆ ಕಿಚಾಯಿಸಿದರು.

Author