ತೀರ್ಥಹಳ್ಳಿ, ಶಾಸಕ ಆರಗ ಜ್ಞಾನೇಂದ್ರ ಅವರ ಮನಃಸ್ಥಿತಿ ಸರಿ ಇರದ ಕಾರಣ ಪದೇ ಪದೇ ನನ್ನ ಬಗ್ಗೆ ಸುಳ್ಳು ಹೇಳುತ್ತಾರೆ. ಅವರ ಮಾತು, ಬಣ್ಣ, ಧರಿಸುವ ಬಟ್ಟೆಗೂ ಸಂಬಂಧವಿಲ್ಲ. ತುರ್ತಾಗಿ ಅವರಿಗೆ ಕೌನ್ಸಿಲಿಂಗ್ ಅಗತ್ಯವಿದೆ. ನಾನು ಜ್ಞಾನೇಂದ್ರರಂತೆ ಕೆಟ್ಟ ಮನುಷ್ಯನಲ್ಲ, ನಾನು ಅಪಾಯಕಾರಿ ಮನುಷ್ಯನಲ್ಲ, ಆರಗ ಜ್ಞಾನೇಂದ್ರ ಅವರ ಸಿದ್ಧಾಂತದ ಗುರು ಸಾವರ್ಕರ್ ನಿಜವಾದ ಅಪಾಯಕಾರಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿರುಗೇಟು ನೀಡಿದರು.
ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಿವಿಲ್ಲದೆ ಮಾತನಾಡುವ ಆರಗ ಜ್ಞಾನೇಂದ್ರ ಬಗರ್‌ಹುಕುಂ ವಿಚಾರದಲ್ಲಿ ಬಾಯಿಗೆ ಬಂದಂತೆ ಮಾತಾಡುತ್ತಾರೆ. ಇವರು ಬರೆದ ಪತ್ರದಿಂದ ೧೦ ಸಾವಿರ ಬಗರ್ ಹುಕುಂ ಫಲಾನುಭವಿಗಳಿಗೆ ಸಮಸ್ಯೆ ಆಗುತ್ತದೆ ಎಂದು ಹೇಳಿದ್ದು, ನಾನು ಸದಾ ಬಗರ್ ಹುಕುಂ ರೈತರ ಪರ ಇದ್ದೇನೆ.
ನನ್ನನ್ನು ಭೂಗಳ್ಳರು ಎಂದು ಆರೋಪಿಸುತ್ತಾರೆ. ನನ್ನ ಮೇಲೆ ಯಾವುದೇ ಅಂತಹ ಪ್ರಕರಣಗಳಿಲ್ಲ. ಬರೀ ಸುಳ್ಳು ಹೇಳಿ ಜನರನ್ನು ತಪ್ಪು ದಾರಿಗೆ ಎಳೆಯುವುರಲ್ಲಿ ಜ್ಞಾನೇಂದ್ರ ನಿಸ್ಸೀಮರೆಂದರು.ಪಟ್ಟಣದ ಸಮೀಪದ ಲೇಔಟ್ ನಿರ್ಮಾಣದ ಹತ್ತಿರ ಮಹಿಳೆಗೆ ಆದ ಅನ್ಯಾಯಕ್ಕೆ ನ್ಯಾಯ ಕೊಡಿಸಲು ಪ್ರತಿಭಟನೆ ಮಾಡಿದ್ದೇನೆ. ಆರಗ ತಮ್ಮ ಆಪ್ತರೊಬ್ಬರ ಪರ ನಿಂತಿದ್ದಾರೆ.ಭೂಗಳ್ಳರಿಗೆ ಬೆಂಬಲ ನೀಡುತ್ತಿರುವುದು ಯಾರು ಎಂದು ಕ್ಷೇತ್ರದ ಜನರಿಗೆ ಗೊತ್ತಿದೆ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರ್ ಮಂಜುನಾಥ್, ಯುವ ಕಾಂಗ್ರೆಸ್ ಮುಖಂಡ ಪೂರ್ಣೇಶ್ ಕೆಳಕೆರೆ,ವಕ್ತಾರ ಆದರ್ಶ ಹುಂಚದಕಟ್ಟೆ,ಶ್ರೇಯಸ್ ರಾವ್,ಜಯಕರ್ ಶೆಟ್ಟಿ,ಗೀತಾ ರಮೇಶ್,ವಿಲಿಯಂ ಮಾರ್ಟಿಸ್,ಶಬನಂ ಮುಂತಾದವರಿದ್ದರು.





