ಶಿವಮೊಗ್ಗ ವಿಮಾನ ನಿಲ್ದಾಣ ಖಾಸಗಿ ಸಂಸ್ಥೆ ಪಾಲಿಗೆ : ನಿರ್ವಹಣೆ,ಕಾರ್ಯಾಚರಣೆ ವಹಿಸಲು KSIIDCಯಿಂದ EOI ಆಹ್ವಾನ

ಶಿವಮೊಗ್ಗ

ಬೆಂಗಳೂರು, ರಾಜ್ಯ ಸರ್ಕಾರದ ನೇರ ನಿರ್ವಹಣೆಯಲ್ಲಿರುವ ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣವನ್ನು ಖಾಸಗಿ ಸಂಸ್ಥೆಯ ನಿರ್ವಹಣೆಗೆ ವಹಿಸುವ ಪ್ರಕ್ರಿಯೆ ಆರಂಭಗೊಂಡಿದೆ.ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ (KSIIDC)ವು ಶಿವಮೊಗ್ಗ ವಿಮಾನ ನಿಲ್ದಾಣವನ್ನು ನಿರ್ವಹಿಸಲು ಖಾಸಗಿ ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣ ನಿರ್ವಾಹಕರು ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಂಸ್ಥೆಗಳಿಂದ Expression of Interest (EOI) ಆಹ್ವಾನಿಸಿದೆ.

ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ನಿರ್ವಹಣೆ ಖಾಸಗಿಯವರ ಕೈಗೆ ಹೋಗಲಿದೆ ಎಂಬ ಚರ್ಚೆ ಶಿವಮೊಗ್ಗದಲ್ಲಿ ಆರಂಭವಾಗಿದೆ. ಆದರೆ ವಿಮಾನ ನಿಲ್ದಾಣವನ್ನು ಸರ್ಕಾರ ಮಾರಾಟ ಮಾಡುವ ಯಾವುದೇ ಉದ್ದೇಶವಿಲ್ಲ ಎಂದು KSIIDC ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಸ್ಪಷ್ಟಪಡಿಸಿದ್ದಾರೆ.

2023ರಲ್ಲಿ ಕಾರ್ಯಾರಂಭಗೊಂಡ ಶಿವಮೊಗ್ಗ ವಿಮಾನ ನಿಲ್ದಾಣವು ಮಲೆನಾಡಿನ ಪ್ರಮುಖ ವಿಮಾನ ಸಂಪರ್ಕ ಕೇಂದ್ರವಾಗಿ ಬೆಳೆಯುತ್ತಿದೆ. ವಿಮಾನ ಸಂಪರ್ಕ ಹೆಚ್ಚಿದಂತೆ ಪ್ರವಾಸೋದ್ಯಮ, ಕೈಗಾರಿಕೆ, ಶಿಕ್ಷಣ, ವೈದ್ಯಕೀಯ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ ಎಂಬ ನಿರೀಕ್ಷೆಯಿದೆ.

ಈ ನಡುವೆ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುವುದರಿಂದ ಸೇವೆಗಳ ಗುಣಮಟ್ಟ ಮತ್ತು ಕಾರ್ಯಾಚರಣೆಯ ದಕ್ಷತೆ ಹೆಚ್ಚಾಗಬಹುದೆಂಬ ನಿರೀಕ್ಷೆಯೊಂದೆಡೆ ಇದ್ದರೆ, ಪ್ರಯಾಣಿಕರ ಮೇಲಿನ ಶುಲ್ಕ, ಸೇವೆಗಳ ದರ ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಚಾರದಲ್ಲಿ ಸರ್ಕಾರದ ನಿಯಂತ್ರಣ ಹೇಗಿರಲಿದೆ ಎಂಬ ಪ್ರಶ್ನೆಗಳೂ ಎದುರಾಗಿವೆ.

EOI ಪ್ರಕ್ರಿಯೆಯಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣ ನಿರ್ವಹಣಾ ಕಂಪನಿಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಗಳು ಭಾಗವಹಿಸುವ ಅವಕಾಶವಿದೆ. ಮುಂದಿನ ಹಂತದಲ್ಲಿ ಅರ್ಹ ಸಂಸ್ಥೆಯ ಆಯ್ಕೆ ಹಾಗೂ ನಿರ್ವಹಣಾ ಒಪ್ಪಂದದ ಷರತ್ತುಗಳು ಅಂತಿಮಗೊಳ್ಳುವ ಸಾಧ್ಯತೆಯಿದೆ.

Author