ಚಿಕ್ಕಮಗಳೂರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಹಮ್ಮಿಕೊಂಡಿರುವ ಸಂಘಟನಾ ಸೃಜನ ಅಭಿಯಾನಕ್ಕೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತಷ್ಟು ವೇಗ ಸಿಕ್ಕಿದ್ದು, ಕೆಪಿಸಿಸಿ ವೀಕ್ಷಕರಾಗಿ ನೇಮಕಗೊಂಡಿರುವ ಕವಿತಾ ಎಂ.ಬಿ. ದೋರತ್ ಅವರು ಪಕ್ಷ ಸಂಘಟನೆಯನ್ನು ತಳಮಟ್ಟದಲ್ಲಿ ಬಲಪಡಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನ ಹಾಗೂ ನಿರ್ದೇಶನದಂತೆ ಜಿಲ್ಲೆಯ ವಿವಿಧ ಬ್ಲಾಕ್ ಮಟ್ಟದ ಸಂಘಟನಾ ಸಭೆಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಅವರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಸಂಘಟನೆಯ ಬಲವರ್ಧನೆಗೆ ಅಗತ್ಯ ಸಲಹೆಗಳನ್ನು ನೀಡುತ್ತಿದ್ದಾರೆ.ಬೀರೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನಡೆದ ಬ್ಲಾಕ್ ಮಟ್ಟದ ಸಭೆಗಳಲ್ಲಿ ಪಾಲ್ಗೊಂಡು, ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸುವ ಕೆಲಸವನ್ನು ಕವಿತಾ ಎಂ.ಬಿ. ದೋರತ್ ನಿರಂತರವಾಗಿ ಕೈಗೊಳ್ಳುತ್ತಿದ್ದಾರೆ.

ಪಕ್ಷದ ಸಂಘಟನೆಯನ್ನು ಗ್ರಾಮ ಮಟ್ಟದಿಂದ ಇನ್ನಷ್ಟು ಸದೃಢಗೊಳಿಸುವ ಉದ್ದೇಶದಿಂದ ವಿವಿಧ ಸಂಘಟನಾ ಚಟುವಟಿಕೆಗಳಿಗೆ ಅವರು ಚಾಲನೆ ನೀಡಿದ್ದು, ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕ ಬೆಳೆಸುತ್ತಿದ್ದಾರೆ.
ಕವಿತಾ ಎಂ.ಬಿ. ದೋರತ್ ಅವರ ಸಂಘಟನಾ ಸಾಮರ್ಥ್ಯ, ಪಕ್ಷದ ಮೇಲಿನ ಬದ್ಧತೆ ಹಾಗೂ ಜನಪರ ಕಾರ್ಯವೈಖರಿಗೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ನೇತೃತ್ವದಲ್ಲಿ ಜಿಲ್ಲೆಯ ಸಂಘಟನಾ ಚಟುವಟಿಕೆಗಳಿಗೆ ಹೊಸ ಚೈತನ್ಯ ದೊರೆತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಕಾರ್ಯಕ್ರಮಗಳಲ್ಲಿ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಾನ್, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂದೀಪ್, ಕೆಪಿಸಿಸಿ ಸಹ ಸಂಯೋಜಕ ಆರ್. ಮೋಹನ್, ಕೆಪಿಸಿಸಿ ವೀಕ್ಷಕರಾದ ಗಫೂರ್ (ಉಡುಪಿ) ಸೇರಿದಂತೆ ಜಿಲ್ಲಾ ಹಾಗೂ ಬ್ಲಾಕ್ ಮಟ್ಟದ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.




