ಶಿವಮೊಗ್ಗ,ಜಿಲ್ಲಾ ಕೇಂದ್ರದ ತಹಶೀಲ್ದಾರ್ ಕಾರ್ಯಾಲಯದ ಮೇಲೆ ಇಂದು ಲೋಕಾಯುಕ್ತ ಪೊಲೀಸರ ತಂಡ ಹಠಾತ್ ಭೇಟಿ ನೀಡಿದ್ದಾರೆ. ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರ ಆದೇಶದ ಮೇರೆಗೆ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದುಕೊಂಡು ಬಂದಿರುವ 15 ಅಧಿಕಾರಿಗಳ ತುಕಡಿಯು ತಹಶೀಲ್ದಾರ್ ಕಚೇರಿ ಸೇರಿದಂತೆ ಕಂದಾಯ ನಿರೀಕ್ಷಕರ (R.I) ಕಚೇರಿಗಳಲ್ಲಿನ ನೂರಾರು ಕಡತಗಳನ್ನು ಪರಿಶೀಲನೆಗೆ ಒಳಪಡಿಸಿದೆ.
ನಗರದ ಹೊರವಲಯದ ಗೋವಿಂದಾಪುರದಲ್ಲಿ ಸುಮಾರು 5.36 ಎಕರೆ ವಿಸ್ತೀರ್ಣದ ಸರ್ಕಾರಿ ಜಾಗವನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು, ಸಾರ್ವಜನಿಕರಿಗೆ ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡುತ್ತಿರುವ ಬೃಹತ್ ಹಗರಣ ನಡೆದಿದೆ ಎನ್ನಲಾದ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ಈ ಅಕ್ರಮ ದಂಧೆಗಾಗಿ ಅಗಸನವಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸರ್ಕಾರಿ ಜಮೀನಿನಲ್ಲಿ ಸದ್ಯ 33 ತಾತ್ಕಾಲಿಕ ಶೆಡ್ ಹಾಗೂ ಗುಡಿಸಲುಗಳನ್ನು ನಿರ್ಮಿಸಲಾಗಿದ್ದು, ಇವುಗಳಿಗೆ ಕಡತಗಳಲ್ಲಿ ಕೇವಲ ಮೇಲ್ಛಾವಣಿ ಖಾತೆ ಎಂದು ತಿದ್ದುಪಡಿ ಮಾಡಿ, ಆನಂತರ ಅಮಾಯಕ ಜನರಿಗೆ ಸೈಟ್ ಹಂಚಿಕೆ ಮಾಡಿ ಖಾತೆ ಮಾಡಿಸಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಲು ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.
ಈ ದಂಧೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಕಚೇರಿಯಿಂದಲೇ ಒಳಗೊಳಗೇ ದಾಖಲೆಗಳನ್ನು ಸಿದ್ಧಪಡಿಸಿಕೊಡಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಈ ಒತ್ತುವರಿಯನ್ನು ಸಂಪೂರ್ಣವಾಗಿ ತೆರವುಗೊಳಿಸುವ ನಿಟ್ಟಿನಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಂದಾಯ ಇಲಾಖೆಯ ಪ್ರತಿಯೊಂದು ಕಡತವನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ. ಇದರೊಂದಿಗೆ, ಶಿವಮೊಗ್ಗದ ನವುಲೆ ಬಡಾವಣೆಯಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಕೆರೆ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಕಂದಾಯ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಅದಕ್ಕೂ ಸಂಬಂಧಿಸಿದ ಮಹತ್ವದ ದಸ್ತಾವೇಜುಗಳನ್ನು ಜಾಲಾಡಲಾಗುತ್ತಿದೆ.
ಸದ್ಯ ಕಚೇರಿಯ ಮುಖ್ಯ ದ್ವಾರಗಳನ್ನು ಬಂದ್ ಮಾಡಿ ಲೋಕಾ ಅಧಿಕಾರಿಗಳ ಸುದೀರ್ಘ ಕಾರ್ಯಾಚರಣೆ ಮುಂದುವರಿದಿದೆ.


