ಶಿವಮೊಗ್ಗದಿಂದ ಉತ್ತರ ಭಾರತದ ರಾಜ್ಯಗಳಿಗೆ ಸಾಗಿಸುತ್ತಿದ್ದ ಸುಮಾರು 50 ಲಾರಿಗಳನ್ನು ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ ಇಲಾಖೆ ವಶಪಡಿಸಿಕೊಂಡ ಹಿನ್ನಲೆ; ಕೇಂದ್ರ ಸರ್ಕಾರ ಮಟ್ಟದಲ್ಲಿ ತಕ್ಷಣ ಮಧ್ಯಪ್ರವೇಶಕ್ಕೆ ಸಂಸದರ ದೃಢ ಭರವಸೆ.
ಶಿವಮೊಗ್ಗ, ಜಿಲ್ಲೆ ಹಾಗೂ ಶಿರಸಿ ಮತ್ತು ಸಿದ್ಧಾಪುರಗಳಲ್ಲಿ ಬೆಳೆದ ಅಡಿಕೆಯನ್ನು ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ನವದೆಹಲಿಯ ಮಾರುಕಟ್ಟೆಗಳಿಗೆ ಅಡಿಕೆ ಸಾಗಿಸುತ್ತಿದ್ದ ಲಾರಿಗಳನ್ನು, ಮಹಾರಾಷ್ಟ್ರ ರಾಜ್ಯದ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆಯು ಸಾಗಾಣಿಕೆ ಮಾರ್ಗದಲ್ಲಿ ವಶಪಡಿಸಿಕೊಂಡಿದೆ. ಬೀಡ್, ನಾಂದೇಡ್, ಔರಂಗಾಬಾದ್, ನಾಗಪುರ, ಧುಳೆ ಮತ್ತು ಹಿಂಗೋಲಿ ಜಿಲ್ಲೆಗಳಲ್ಲಿ ಒಟ್ಟು ಸುಮಾರು 50 ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲೆ ಹಾಗೂ ಶಿರಸಿ ಮತ್ತು ಸಿದ್ಧಾಪುರ ತಾಲ್ಲೂಕಿನ ಅಡಿಕೆ ಬೆಳೆಗಾರರ ಪ್ರತಿನಿಧಿ ನಿಯೋಗ ಇಂದು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಭೇಟಿ ಮಾಡಿ, ಸಾವಿರಾರು ರೈತ ಕುಟುಂಬಗಳ ಜೀವನೋಪಾಯಕ್ಕೆ ಸಂಚಕಾರ ತಂದಿರುವ ಗಂಭೀರ ಸಮಸ್ಯೆಯನ್ನು ಗಮನಕ್ಕೆ ತಂದರು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಸಂಬಂಧಿತ ಅಡಿಕೆಯನ್ನು ಮಹಾರಾಷ್ಟ್ರದಲ್ಲಿ ಎಲ್ಲಿಯೂ ಮಾರಾಟ ಮಾಡಿಲ್ಲ ಅಥವಾ ವಿತರಿಸಿಲ್ಲ. ಈ ಸರಕು ಕೇವಲ ಸಾಗಾಣಿಕೆಯಲ್ಲಿ ಮಾತ್ರ ಇತ್ತು. ಅಷ್ಟೇ ಅಲ್ಲ, ಗುಟ್ಕಾ, ಪಾನ್ ಮಸಾಲಾ ಮತ್ತು ಜರ್ದಾದಂತಹ ನಿಷೇಧಿತ ಪದಾರ್ಥಗಳ ವರ್ಗಕ್ಕೆ ಅಡಿಕೆ ಸೇರುವುದಿಲ್ಲ, ಮಹಾರಾಷ್ಟ್ರದಲ್ಲಿ ಅಡಿಕೆಯ ಮೇಲೆ ಯಾವುದೇ ನಿಷೇಧ ಇಲ್ಲ. ಆದ್ದರಿಂದ, ಈ ವಾಹನಗಳ ವಶಪಡಿಸಿಕೊಳ್ಳುವಿಕೆಗೆ ಕಾನೂನಿನ ಯಾವುದೇ ಆಧಾರ ಇರುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ನಿಯೋಗ ಸಂಸದರಿಗೆ ಮನವಿ ಸಲ್ಲಿಸಿತು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ:
ಸಾವಿರಾರು ಅಡಿಕೆ ಬೆಳೆಗಾರರ ಪ್ರತಿನಿಧಿಗಳು ಮಾಮ್ಕೋಸ್ ಸಂಘಟನೆಯ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕೂಡ ಮನವಿ ಸಲ್ಲಿಸಿದರು. ಪರಿಸ್ಥಿತಿಯ ತೀವ್ರತೆಯನ್ನು ಮನಗಂಡ ಯಡಿಯೂರಪ್ಪನವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ತಕ್ಷಣ ದೂರವಾಣಿ ಕರೆ ಮಾಡಿ, ಅಡಿಕೆ ಬೆಳೆಗಾರರ ಸಂಕಷ್ಟವನ್ನು ವಿವರಿಸಿ ಸ್ಥಳದಲ್ಲಿಯೇ ಸೂಕ್ತ ನೆರವು ನೀಡುವಂತೆ ಒತ್ತಾಯಿಸಿದ್ದಾರೆ.
ಅಡಿಕೆ ಬೆಳೆಗಾರರ ಪರ ನಿಂತ ಸಂಸದ ಬಿ.ವೈ.ರಾಘವೇಂದ್ರ: ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಅವರು ಅಡಿಕೆ ಬೆಳೆಗಾರರ ಈ ಸಂಕಟಕ್ಕೆ ತಕ್ಷಣ ಸ್ಪಂದಿಸಿ, ಅಡಿಕೆ ಬೆಳೆಯು ಈ ಭಾಗದ ರೈತ ಸಮುದಾಯದ ಬೆನ್ನೆಲುಬಾಗಿದ್ದು, ಶಿವಮೊಗ್ಗ, ಶಿರಸಿ ಮತ್ತು ಸಿದ್ಧಾಪುರದ ಸಾವಿರಾರು ರೈತ ಕುಟುಂಬಗಳ ಜೀವನ ಈ ವ್ಯಾಪಾರದ ಮೇಲೆ ಸಂಪೂರ್ಣ ಅವಲಂಬಿತವಾಗಿದೆ. ವಾಹನಗಳ ವಶಪಡಿಸಿಕೊಳ್ಳುವಿಕೆಯಿಂದ ಅವರಿಗೆ ತೀವ್ರ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡಿಕೆ ಸಾಗಾಣಿಕೆಗೆ ಯಾವುದೇ ಅಡಚಣೆ ಆಗಬಾರದೆಂದು ಈಗಾಗಲೇ ನಿರ್ದೇಶನ ನೀಡಿದ್ದರೂ, ವಾಹನಗಳ ವಶಪಡಿಸಿಕೊಳ್ಳುವಿಕೆ ನಿಂತಿಲ್ಲ ಎಂಬ ಅಂಶವನ್ನು ಸಂಸದ ರಾಘವೇಂದ್ರ ಅವರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ.
ಬೆಳೆಗಾರರಿಗೆ ಸಂಸದರ ಭರವಸೆ:•
ವಶಪಡಿಸಿಕೊಂಡ ಎಲ್ಲ ವಾಹನಗಳ ತಕ್ಷಣ ಮತ್ತು ಬೇಷರತ್ತು ಬಿಡುಗಡೆಗಾಗಿ ಕೇಂದ್ರ ಸರ್ಕಾರ ಮಟ್ಟದಲ್ಲಿ ಪ್ರಬಲ ಪ್ರಯತ್ನ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನ್ವೀಸ್ ಅವರೊಂದಿಗೆ ನೇರ ಸಂಪರ್ಕ ಸಾಧಿಸಿ, ಅಡಿಕೆ ಸಾಗಾಣಿಕೆಗೆ ಮುಕ್ತ ಅನುಮತಿಯನ್ನು ಔಪಚಾರಿಕವಾಗಿ ಖಾತ್ರಿಗೊಳಿಸಿ ಜಾರಿಗೆ ತರುವುದು.ಅಡಿಕೆ ಬೆಳೆಗಾರರ ಹಕ್ಕು ಮತ್ತು ಜೀವನೋಪಾಯ ರಕ್ಷಣೆಗೆ ತಾವು ಸದಾ ಬದ್ಧರಾಗಿದ್ದು, ಸ್ಥಾಯಿ ಪರಿಹಾರ ದೊರೆಯುವವರೆಗೆ ಈ ವಿಷಯವನ್ನು ಅತ್ಯಂತ ತ್ವರಿತ ಗತಿಯಲ್ಲಿ ಮುಂದುವರೆಸುವುದಾಗಿ ಸಂಸದ ರಾಘವೇಂದ್ರ ಅವರು ಅಡಿಕೆ ಬೆಳೆಗಾರರ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಅಡಿಕೆ ಬೆಳೆಗಾರರ ಸಂಘದ ಉಪಾಧ್ಯಕ್ಷರಾದ ಮಹೇಶ್ ಹುಲ್ಕುಳಿ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಮ್ಯಾಮ್ಕೋಸ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಜಿಲ್ಲೆಯ ಪ್ರಮುಖ ಅಡಿಕೆ ಬೆಳೆಗಾರರು ಹಾಜರಿದ್ದರು.


