ಶಿವಮೊಗ್ಗ | ಪರಿಸರ ಪ್ರೇಮ ತಂಡದಿಂದ ಶಾಲೆಗೆ ಬಣ್ಣ ಹಚ್ಚುವ ಕಾರ್ಯಕ್ರಮ

ಶಿವಮೊಗ್ಗ

ಶಿವಮೊಗ್ಗ, ಕೂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಪ್ರೇಮ ತಂಡ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ಹಾಗೂ ಕೂಡ್ಲಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಶಾಲೆಗೆ ಬಣ್ಣ ಹಚ್ಚುವ ಕಾರ್ಯಕ್ರಮ,

ಒಂದನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ನೋಟ್ ಪುಸ್ತಕ ವಿತರಣೆ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಭಾನುವಾರ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಧಾರವಾಡ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶ್ರೀ ಮಲ್ಲಿಕಾರ್ಜುನ ತೊದಲಬಾಗಿ ಅವರು, ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ಆಸಕ್ತಿ ಹಾಗೂ ಶ್ರದ್ಧೆಯನ್ನು ಬೆಳೆಸಿಕೊಂಡರೆ ಜೀವನದಲ್ಲಿ ಗುರಿ ತಲುಪುವುದು ನಿಶ್ಚಿತ ಎಂದು ತಿಳಿಸಿದರು.

ವಿದ್ಯಾಭ್ಯಾಸವು ವ್ಯಕ್ತಿಯ ಬದುಕನ್ನು ರೂಪಿಸುವ ಶಕ್ತಿ ಹೊಂದಿದ್ದು, ನಿರಂತರ ಪರಿಶ್ರಮ ಮತ್ತು ಶಿಸ್ತಿನಿಂದ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬಹುದೆಂದು ಕಿವಿಮಾತು ಹೇಳಿದರು. ಗ್ರಾಮೀಣ ಭಾಗದ ಮಕ್ಕಳಲ್ಲಿಯೂ ಅಪಾರ ಪ್ರತಿಭೆ ಅಡಗಿದ್ದು, ಸೂಕ್ತ ಮಾರ್ಗದರ್ಶನ ದೊರೆತರೆ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬಹುದೆಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಅವರು ಮಾತನಾಡಿ, ಶಿಕ್ಷಕರು ಕನ್ನಡ ಸಾಹಿತ್ಯದ ಅಧ್ಯಯನಕ್ಕೆ ಹೆಚ್ಚಿನ ಮಹತ್ವ ನೀಡಿ ಮಕ್ಕಳಿಗೆ ಭಾಷೆಯ ಸೊಗಡು, ಸಾಹಿತ್ಯದ ಸತ್ವ ಹಾಗೂ ಸಂಸ್ಕೃತಿಯ ಮೌಲ್ಯಗಳನ್ನು ತಿಳಿಸಿಕೊಡಬೇಕೆಂದು ಹೇಳಿದರು.

ಕನ್ನಡ ಭಾಷೆಯ ಮೇಲಿನ ಪ್ರೀತಿ ಮತ್ತು ಅಭಿಮಾನವನ್ನು ಮಕ್ಕಳಲ್ಲಿ ಬೆಳೆಸಿದಾಗ ಮಾತ್ರ ಭಾಷೆಯ ಉಳಿವು ಹಾಗೂ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಗ್ರಾಮದ ಶಿಲ್ಪಿಗಳು, ಜಾನಪದ ಕಲಾವಿದರು ಹಾಗೂ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ವಿವಿಧ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾದ ಹಳೆ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಾಲೆಯ ಸುಂದರೀಕರಣಕ್ಕಾಗಿ ಶಾಲೆಗೆ ಬಣ್ಣ ಹಚ್ಚುವ ಕಾರ್ಯಕ್ಕೂ ಚಾಲನೆ ನೀಡಲಾಯಿತು. ಒಂದನೇ ತರಗತಿಗೆ ದಾಖಲಾದ ಪುಟ್ಟ ಮಕ್ಕಳಿಗೆ ಶಾಲಾ ಬ್ಯಾಗ್ ಹಾಗೂ ನೋಟ್ ಪುಸ್ತಕಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎಸ್. ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಲಕ್ಕಮ್ಮನವರ್ ,ಪಿ.ಕೆ, ಸತೀಶ್,ತಿಪ್ಪೇಸ್ವಾಮಿ, ರಮೇಶಪ್ಪ ಕರಿಯಪ್ಪ, ಶಿವಾನಾಯ್ಕ, ರಮಾ, ಅನ್ನಪೂರ್ಣ, ಪಿ.ಡಿ.ಓ ಶ್ರೀನಿವಾಸ್ ಹನುಮಂತಪ್ಪ,ಪರ್ವಿನ್ ಬಾನು , ಮೈಲಾರಪ್ಪ , ಕುಮಾರಪ್ಪ, ಸಿದ್ದಪ್ಪ, ಪ್ರಭಾಕರ್,ಫಕ್ಕೀರಪ್ಪ ಸೇರಿದಂತೆ ಗ್ರಾಮಸ್ಥರು, ಶಿಕ್ಷಕರು ಹಾಗೂ ಪೋಷಕರು ಭಾಗವಹಿಸಿದ್ದರು.ಮುಖ್ಯ ಶಿಕ್ಷಕ ರಮೇಶ್ ಪಿ.ಕೆ. ಸ್ವಾಗತಿಸಿದರು. ಶಿಕ್ಷಕಿ ವಿನುತಾ ಪ್ರಾರ್ಥಿಸಿದರು. ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ದೀಪಾ ವಂದಿಸಿದರು.

Author