ಮೈಸೂರು, ಭಾರತದ ಸ್ವಚ್ಛ ನಗರಗಳಲ್ಲಿ ಒಂದಾಗಿರುವ ಮೈಸೂರು ಈ ವರ್ಷದ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಂ.1 ಸ್ಥಾನ ಪಡೆಯಲು ವಿವಿಧ ತಯಾರಿಗಳನ್ನು ನಡೆಸುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದಕ್ಕೆ ಕಡಿವಾಣ ಹಾಕಲು ಮೈಸೂರು ಮಹಾನಗರ ಪಾಲಿಕ ಬೊಂಬಾಟ್ ಐಡಿಯಾವೊಂದನ್ನು ಮಾಡಿದ್ದು, ನಗರ ಪ್ರಮುಖ ರಸ್ತೆಯೊಂದರ ಪಾದಚಾರಿ ಮಾರ್ಗಕ್ಕೆ ಅಂಟಿಕೊಂಡಿರುವ ಗೋಡೆಗೆ ಕನ್ನಡಿಗಳನ್ನು ಅಳವಡಿಕೆ ಮಾಡಿದೆ.
ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಅಧಿಕಾರಿಗಳು ಎಷ್ಟೆಲ್ಲಾ ಪ್ರಯತ್ನಗಳನ್ನು ಮಾಡಿದರೂ ದೇಶದಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಮೂತ್ರ ವಿಸರ್ಜನೆ ಮಾಡುವ ದುರಭ್ಯಾಸ ಇನ್ನೂ ಚಾಲ್ತಿಯಲ್ಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಆದೆಷ್ಟೇ ಫಲಕಗಳನ್ನು ಹಾಕಿದರೂ ದಂಡ ವಿಧಿಸಿದರೂ ಈ ಅಭ್ಯಾಸ ಮಾತ್ರ ಕಡಿಮೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಬಲವಂತವಾಗಿ ಈ ಅಭ್ಯಾಸವನ್ನು ತಪ್ಪಿಸುವ ಬದಲಾಗಿ ಆತ್ಮಾವಲೋಕನವಾಗುವಂತೆ ಮಾಡಲು ಮೈಸೂರಿನ ಗ್ರಾಮಾಂತರ ಭಾಗದ ಉಪನಗರ ಬಸ್ ನಿಲ್ದಾಣದ ಬಳಿ ಗೋಡೆಗೆ ಉಕ್ಕಿನ ಪ್ರತಿಫಲಿತ ಮೇಲ್ಮೈಯ ಕನ್ನಡಿಗಳನ್ನು ಅಳವಡಿಸಿರುವ ಮೈಸೂರು ಮಹಾನಗರ ಪಾಲಿಕೆ ಅಳವಡಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಕನ್ನಡಿಯ ವಿಡಿಯೋಮೈಸೂರಿನ ಬಸ್ ನಿಲ್ದಾಣದಲ್ಲಿ ಅಳವಡಿಸಿರುವ ಕನ್ನಡಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಹರಿದಾಡುತ್ತಿದ್ದು, ಇದರಲ್ಲಿ ಬಸ್ ನಿಲ್ದಾಣದ ಒಂದು ಭಾಗದಿಂದ ಇನ್ನೊಂದು ಭಾಗದಲ್ಲಿ ಅದರ ಉದ್ದಕ್ಕೂ ಈ ಉಕ್ಕಿನ ಕನ್ನಡಿಗಳನ್ನು ಹಾಕಲಾಗಿದ್ದು, ಇದಕ್ಕೆ ಸುತ್ತಲೂ LED ಲೈಟ್‌ಗಳನ್ನು ಅಳವಡಿಸಲಾಗಿದೆ.
ಇದರಿಂದಾಗಿ ರಾತ್ರಿ ಹೊತ್ತಿನಲ್ಲಿಯೂ ಸಹ ಈ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡುವ ಸಾಧ್ಯತೆಯನ್ನು ತಪ್ಪಿಸಲಾಗಿದೆ.
ಕನ್ನಡಿ ಅಳವಡಿಸಲು ಇರುವ ಉದ್ದೇಶ
ಹೀಗೆ ಉಪನಗರ ಬಸ್ ನಿಲ್ದಾಣದ ಬಳಿ ಗೋಡೆಗೆ ಕನ್ನಡಿ ಅಳವಡಿಸುವ ಉದ್ದೇಶ ಸ್ಪಷ್ಟವಾಗಿದ್ದು, ಸಾರ್ವಜನಿಕ ಸ್ಥಳವಾದ ಈ ಜಾಗದಲ್ಲಿ ಮೂತ್ರ ವಿಸರ್ಜಿಸಲು ಪ್ರಯತ್ನಿಸುವ ಯಾರಾದರೂ ಸಹ ಅಲ್ಲಿನ ಕನ್ನಡಿಯಿಂದಾಗಿ ತಮ್ಮದೇ ಪ್ರತಿಬಿಂಬವನ್ನು ನೋಡಬೇಕಾಗುತ್ತದೆ.
ಹೀಗೆ ತಮ್ಮದೇ ಪ್ರತಿಬಿಂಬವನ್ನು ನೋಡುತ್ತಾ ಮೂತ್ರವಿಸರ್ಜನೆ ಮಾಡುವುದು ಅವರಿಗೆ ಮುಜುಗರವಾಗಲಿದ್ದು, ಈ ಮೂಲಕ ಈ ಕೃತ್ಯ ಎಸಗುವವರಿಗೆ ಆತ್ಮಾವಲೋಕನ ಮಾಡಿಕೊಳ್ಳುವಲ್ಲಿ ಪ್ರಚೋದನೆ ಮಾಡಲಿದ್ದು, ಈ ಮೂಲಕ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಮಾನಸಿಕ ಪರಿವರ್ತನೆ ತರುವಲ್ಲಿ ಸಹಕಾರಿಯಾಗಲಿದೆ.
ಸದ್ಯ ಮೈಸೂರು ಪಾಲಿಕೆ ಅಧಿಕಾರಿಗಳ ಈ ವಿಭಿನ್ನ ಐಡಿಯಾ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಮೈಸೂರು ಪಾಲಿಕೆಯ ಐಡಿಯಾಗೆ ನೆಟ್ಟಿಗರು ಫಿದಾ
ಸದ್ಯ, ಮೈಸೂರು ಪಾಲಿಕೆಯ ಈ ವಿಭಿನ್ನ ಪ್ರಯತ್ನಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಹಲವಾರು ಬಳಕೆದಾರರು ಇದನ್ನು ಸಾಮಾನ್ಯ ನಗರ ಸಮಸ್ಯೆಗೆ ಬುದ್ಧಿವಂತ ಮತ್ತು ಪ್ರಾಯೋಗಿಕ ಪರಿಹಾರವಾಗಿದ್ದು, ಅತ್ಯುತ್ತಮ ಚಿಂತನೆಯಾಗಿದೆ ಎಂದರೆ, ಇನ್ನೂ ಹಲವರು ಇದು ಅದ್ಬುತ ಐಡಿಯಾ ಆಗಿದ್ದು, ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಇತರ ನಗರಗಳಲ್ಲಿಯೂ ಇದನ್ನು ಅಳವಡಿಸಬೇಕು ಎಂದು ಸಲಹೆಗಳನ್ನು ನೀಡಿದ್ದಾರೆ.

