ಗ್ರಾಹಕರಿಗೆ ಅಡುಗೆ ಅನಿಲ ಬೆಲೆ ಏರಿಕೆಯ ಶಾಕ್..!

ದೇಶ

ಹೊಸದಿಲ್ಲಿ, ಗ್ರಾಹಕರಿಗೆ ಅಡುಗೆ ಅನಿಲ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಮೇ 1 ಜಾರಿಗೆ ಬರುವಂತೆ 19 ಕೆಜಿ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಬರೋಬ್ಬರಿ 993 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ.

ಈ ಬೆಲೆ ಏರಿಕೆಯ ನಂತರ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ 3,071.50 ರೂ., ಬೆಂಗಳೂರಿನಲ್ಲಿ 3154 ರೂ. ತಲುಪಿದೆ ಎಂದು ಮೂಲಗಳು ತಿಳಿಸಿವೆ.

ಜತೆಗೆ, 5 ಕೆಜಿ ಫ್ರೀ ಟ್ರೇಡ್ ಎಲ್‌ಪಿಜಿ (ಎಫ್‌ಟಿಎಲ್) ಸಿಲಿಂಡರ್‌ಗಳ ಬೆಲೆಯನ್ನು 261 ರೂ. ಹೆಚ್ಚಿಸಲಾಗಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಗಗನಕ್ಕೇರಿದ್ದರೂ, ಸಾಮಾನ್ಯ ಜನರಿಗೆ ಮತ್ತು ಗೃಹಬಳಕೆದಾರರಿಗೆ ಸದ್ಯಕ್ಕೆ ಯಾವುದೇ ಹೊರೆಯಾಗಿಲ್ಲ.

14.2 ಕೆಜಿ ತೂಕದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಬೆಂಗಳೂರಿನಲ್ಲಿ ಇದರ ಬೆಲೆ 915 ರೂಪಾಯಿಯಲ್ಲೇ ಮುಂದುವರಿದಿದೆ. ಕೊನೆಯದಾಗಿ ಮಾರ್ಚ್ 7 ರಂದು ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ 60 ರೂಪಾಯಿ ಏರಿಕೆ ಮಾಡಲಾಗಿತ್ತು.

ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು ಅಂತರಾಷ್ಟ್ರೀಯ ಮಾರುಕಟ್ಟೆಯ ದರ ಮತ್ತು ಕರೆನ್ಸಿ ವಿನಿಮಯ ದರಗಳನ್ನು ಆಧರಿಸಿ ಪ್ರತಿ ತಿಂಗಳ ಮೊದಲ ದಿನದಂದು ಎಲ್‌ಪಿಜಿ ಬೆಲೆಗಳನ್ನು ಪರಿಷ್ಕರಿಸುತ್ತವೆ.

ಪಶ್ಚಿಮ ಏಷ್ಯಾದಲ್ಲಿ ತೀವ್ರಗೊಂಡಿರುವ ಯುದ್ಧ ಮತ್ತು ಸಂಘರ್ಷವೇ ಈ ಬೆಲೆ ಏರಿಕೆಗೆ ನೇರ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಉಂಟಾಗಿದೆ.

ಪ್ರಮುಖ ಇಂಧನ ಕಾರಿಡಾರ್ ಆಗಿರುವ ‘ಹಾರ್ಮುಜ್ ಜಲಸಂಧಿ’ ಮುಚ್ಚಲ್ಪಟ್ಟಿರುವುದರಿಂದ ಜಾಗತಿಕ ತೈಲ ಬೆಲೆ ಶೇ. 50 ರಷ್ಟು ಹೆಚ್ಚಾಗಿದೆ. ಇದರಿಂದಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್ ದರವನ್ನು ಪರಿಷ್ಕರಿಸುವುದು ಅನಿವಾರ್ಯವಾಗಿದೆ.

ಕಳೆದ ತಿಂಗಳಷ್ಟೇ ವಾಣಿಜ್ಯ ಸಿಲಿಂಡರ್ ಬೆಲೆ 195 ರಿಂದ 218 ರೂಪಾಯಿಗಳವರೆಗೆ ಏರಿಕೆಯಾಗಿತ್ತು. ಈಗ ಮತ್ತೆ ಭಾರಿ ಏರಿಕೆ ಕಂಡಿರುವುದು ಹೋಟೆಲ್, ರೆಸ್ಟೋರೆಂಟ್ ಮತ್ತು ಸಣ್ಣ ಕೈಗಾರಿಕೆಗಳ ಮೇಲೆ ಭಾರಿ ಪರಿಣಾಮ ಬೀರಲಿದೆ. ಇದು ಹೊರಗಿನ ಆಹಾರ ಪದಾರ್ಥಗಳ ಬೆಲೆ ಏರಿಕೆಗೂ ಕಾರಣವಾಗುವ ಸಾಧ್ಯತೆಯಿದೆ.

ಒಂದೆಡೆ ಎಲ್‌ಪಿಜಿ ಬೆಲೆ ಏರಿಕೆಯಾಗುತ್ತಿದ್ದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬೆಂಗಳೂರಿನಲ್ಲಿ ಸಾಮಾನ್ಯ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 102.92 ರೂ. ಮತ್ತು ಡೀಸೆಲ್ ಬೆಲೆ 90.99 ರೂ. ರಷ್ಟಿದೆ. ಕಳೆದ ವರ್ಷದ ಮಾರ್ಚ್‌ನಲ್ಲಿ ಲೀಟರ್‌ಗೆ 2 ರೂಪಾಯಿ ಕಡಿತಗೊಳಿಸಿದ ನಂತರ ಇಂಧನ ದರಗಳು ಸ್ಥಿರವಾಗಿವೆ.

Author