ಹೊಸನಗರ | ದುಶ್ಚಟಗಳಿಗೆ ಬಲಿಯಾಗಿ, ಬಂಗಾರದಂತಹ ಬದುಕನ್ನು ಹಾಳು ಮಾಡಿಕೊಳ್ಳಬೇಡಿ : ನಾಗೇಶ್ ಬಿದರಗೋಡು ವಿಷಾದ

ಶಿವಮೊಗ್ಗ

ಹೊಸನಗರ,ವಿದ್ಯಾರ್ಥಿಗಳು ಇಂದು ಅತಿ ಹೆಚ್ಚು ದುಶ್ಚಟಗಳಿಗೆ ಬಲಿಯಾಗಿ, ಬಂಗಾರದಂತಹ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಅತ್ಯಂತ ದುಃಖದ ಸಂಗತಿಯಾಗಿದೆ.

ಯಾವುದೋ ಸಿನೆಮಾ ನಟರನ್ನು ಬದುಕಿನ ಹೀರೋ ಎಂದುಕೊಳ್ಳುವವರಿಗೆ, ಬಿಸಿಲು ಮಳೆ ಎನ್ನದೇ, ಅಹರ್ನಿಶಿ ದುಡಿಯುವ ಅಪ್ಪ ಅಮ್ಮ ಹೀರೋ ಎಂದು ಅನಿಸುವುದೇ ಇಲ್ಲ, ಯಾಕೆ?” ಎಂದು ಶಿವಮೊಗ್ಗದ ಸರಕಾರಿ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ನಾಗೇಶ ಬಿದರಗೋಡು ವಿಷಾದಿಸಿದರು.

ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಹಾಗೂ ವಿವಿಧ ವೇದಿಕೆಯ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿ ವಿದ್ಯಾರ್ಥಿಗಳಿಗೆ ಬದುಕಿನ ನಿಜವಾದ ಸ್ವಾರಸ್ಯವಿರುವುದು ಚಟಗಳಲ್ಲಿ ಅಲ್ಲ, ಉತ್ತಮ ಹವ್ಯಾಸಗಳಲ್ಲಿ ಎಂದು ಹೇಳಿ, ಏನಾದರೂ ಆಗುವ ಮೊದಲು ಮಾನವನಾಗು ಎಂಬ ಕರೆ ನೀಡಿದರು.

ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಮಾತನಾಡಿ , “ಅತಿವೇಗದ ಬದುಕಿಗೆ ಕಡಿವಾಣ ಬೇಕು, ನೆಮ್ಮದಿಯುತವಾದ ಬದುಕು ನಮ್ಮದಾಗಬೇಕೇ ಹೊರತೂ ಹಣದ ಹಿಂದೆ ಓಡುವ ಬದುಕು ನಮ್ಮದಾಗರಬಾರದು” ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಕಳೆದ ಸಾಲಿನಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು.

ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರ ಅಶ್ವಿನಿ ಕುಮಾರ್ ಮಾತನಾಡಿ , ಕಾಲೇಜಿನಲ್ಲಿ ಓದು ಬರೆಹ ಅಂಕದ ಜೊತೆಗೆ ಕೌಶಲವನ್ನು ಬೆಳೆಸಿಕೊಳ್ಳಬೇಕು, ಅಂಕಗಳಿಗೆ ಎಷ್ಟು ಮುಖ್ಯವೋ ಕೌಶಲವೂ ಅಷ್ಟೇ ಮುಖ್ಯ, ಅದರೊಂದಿಗೆ ಹೆತ್ತವರನ್ನು, ಬೋಧಿಸುವ ಗುರುಗಳನ್ನು ಗೌರವಿಸುವ ಬದುಕು ನಮ್ಮದಾಗಬೇಕು ಎಂದರು.

ಇಡೀ ವರ್ಷದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ‌ ಮಾಡಿದ ವಿದ್ಯಾರ್ಥಿಗಳು ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ .‌ಉಮೇಶ್ಕೆ. ಅಧ್ಯಕ್ಷತೆ ವಹಿಸಿದ್ದರು.

ಸಾಂಸ್ಕೃತಿಕ ವೇದಿಕೆಯ ಸಂಚಾಲಕಿ ಮೇದಿನಿ‌ ಕೆ.ಎಸ್ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.‌ಕೆ ಶ್ರೀಪತಿ‌ ಪ್ರಾಸ್ತಾವಿಕ ನುಡಿಗಳನ್ನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ರಾಕೇಶ್ ವಂದಿಸಿದರು.

ಈಶ್ವರಿ ಪ್ರಾರ್ಥಿಸಿದರು. ಮೈತ್ರಿ ಹಾಗೂ ನಾಗವೇಣಿ ನಿರೂಪಿಸಿದರು.ಕಾಲೇಜಿನ ಎಲ್ಲಾ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು. ಭೋಜನದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು.

Author