ರಾಮರಾಜ್ಯ ಸ್ಥಾಪನೆಯಾಗಬೇಕೆ? ನನ್ನ ಕೈಗೆ ಅಧಿಕಾರ ಕೊಡಿ : ಎಚ್ ಡಿ ಕೆ..!

ರಾಜಕೀಯ

ಕೇವಲ 2 ಸಾವಿರ ರೂಪಾಯಿ ಗ್ಯಾರಂಟಿ ಹಣದಿಂದ ಸಾಮಾನ್ಯ ಜನರು, ಬಡವರ ಅಭಿವೃದ್ಧಿ ಸಾಧ್ಯವಿಲ್ಲ. ಮಹಿಳೆಯರು ಈ ಸಣ್ಣ ಮೊತ್ತಕ್ಕೆ ಮರುಳಾಗಬಾರದು. ಇಂತಹ ಗ್ಯಾರಂಟಿಗಳಿಂದ ರಾಜ್ಯ ಸರ್ಕಾರಗಳಿಗೆ ಸಂಬಳ ಕೊಡಲಾಗದಂತ ದುಸ್ಥಿತಿ ಎದುರಾಗಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಹೊಳೆನರಸೀಪುರ ತಾಲೂಕಿನ ಉದ್ದನ ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಕೇವಲ ಎರಡು ಸಾವಿರ ರೂಪಾಯಿಯಿಂದ ಅಭಿವೃದ್ಧಿ ಸಾಧ್ಯವಿಲ್ಲ. ಅದರಿಂದ ಆರೋಗ್ಯ, ಶಿಕ್ಷಣ ಸೇರಿದಂತೆ ಕುಟುಂಬಗಳ ಯಾವ ಅಗತ್ಯವು ಪೂರೈಕೆ ಆಗುವುದಿಲ್ಲ. ದೊಡ್ಡ ದೊಡ್ಡ ಕಾಯಿಲೆಗಳು ಬಂದಾಗ ಜನರಿಗೆ ಈ ಎರಡು ಸಾವಿರ ರೂಪಾಯಿಯಿಂದ ಚಿಕಿತ್ಸೆ ಪಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ ಸಾಲ ಮಾಡಿ ನಿಮ್ಮ ತಲೆಯ ಮೇಲೆ ಹೊರೆ ಹೊರೆಸಿ 2000 ಗ್ಯಾರಂಟಿ ಕೊಡುತ್ತಿದೆ. ದಿನ ಬೆಳಗ್ಗೆ ಬೆಲೆ ಏರಿಕೆ ಮಾಡಿ ತೆರಿಗೆ ಏರಿಸಿದರೆ 2000 ಏನು ಬಂತು, ನಾನಾದರೆ 5000 ಕೊಡುತ್ತಿದ್ದೆ. ನಿಮಗೆ ಗ್ಯಾರಂಟಿ ಬೇಕಾದರೆ ನಾನೇ 5 ಸಾವಿರ ರೂಪಾಯಿ ಕೊಡುತ್ತೇನೆ ಎಂದರು.

ನನ್ನ ಕೈಗೆ ಅಧಿಕಾರ ಕೊಡಿ ರಾಮರಾಜ್ಯ ಸ್ಥಾಪನೆ ಮಾಡುತ್ತೇನೆ,ಒಮ್ಮೆ ನನ್ನ ಕೈಗೆ ಸರ್ಕಾರ ಕೊಡಿ, ಕರ್ನಾಟಕದಲ್ಲಿ ರಾಮರಾಜ್ಯ ಸ್ಥಾಪನೆ ಮಾಡಿ ತೋರಿಸುತ್ತೇನೆ, ನಾನು ಸಿಎಂ ಆದರೆ 5000 ಕೊಡುತ್ತೇನೆ ಎಂದರು.

ಸರ್ಕಾರಿ ನೌಕರರ ವೇತನ ನೀಡಲು ಹಣವಿಲ್ಲ,ರಾಜ್ಯದಲ್ಲಿ ಮಾರ್ಚ್ ತಿಂಗಳ ಸರ್ಕಾರಿ ನೌಕರರ ವೇತನವನ್ನು ಇನ್ನೂ ಕೊಟ್ಟಿಲ್ಲ ಎನ್ನುವ ಮಾಹಿತಿಯು ಇದೆ. ಹಾಗೆಯೇ ಕಾಂಗ್ರೆಸ್ ಆಡಳಿತ ಇರುವ ಹಿಮಾಚಲ ಪ್ರದೇಶದಲ್ಲಿಯೂ ಸರ್ಕಾರಿ ನೌಕರರ ಸಂಬಳವನ್ನು ನೀಡಲು ಪರದಾಡುತ್ತಿದೆ. ಆ ಸರ್ಕಾರವು ನೌಕರರ ಸಂಬಳವನ್ನು ಕಡಿತ ಮಾಡಿಕೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಹೀಗಾಗಿ ರಾಜ್ಯಗಳ ಅಭಿವೃದ್ಧಿ ಸಂಪೂರ್ಣವಾಗಿ ಹಳಿತಪ್ಪಿದೆ, ಇದಕ್ಕೆ ಕಾಂಗ್ರೆಸ್ ಕಾರಣವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.ಸುಮಾರು 7,26,000 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಕರ್ನಾಟಕ ಸರ್ಕಾರ ಸಾಲ ಮಾಡಿದೆ. ಕಾಂಗ್ರೆಸ್ ಸರ್ಕಾರವೇ ಅತಿಹೆಚ್ಚು ಸಾಲ ಮಾಡಿದೆ. ರಾಜ್ಯದ ಪ್ರತಿಯೊಬ್ಬರ ತಲೆಯ ಮೇಲೆಯೂ ಕನಿಷ್ಠವೆಂದರೂ ಒಂದು ಲಕ್ಷ ರೂಪಾಯಿಗೂ ಅಧಿಕ ಸಾಲವಿದೆ. ಇದಕ್ಕೆ ಕಾರಣ ಯಾರು? ಇದನ್ನು ತೀರಿಸುವವರು ಯಾರು? ಇಷ್ಟು ಸಾಲವನ್ನು ಮಾಡಿದರೆ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯವೇ ಎಂದು ಸಚಿವ ಕುಮಾರಸ್ವಾಮಿ ಅವರು ಆತಂಕ ವ್ಯಕ್ತಪಡಿಸಿದರು.

ಒಂದು ಕೈಯಲ್ಲಿ ನಿಮಗೆ 2000 ಕೊಡುತ್ತಾರೆ. ಇನ್ನೊಂದು ಕೈಯಲ್ಲಿ ತೆರಿಗೆ ಮೇಲೆ ತೆರಿಗೆ ವಿಧಿಸುತ್ತಾರೆ. ಬೆಲೆ ಏರಿಕೆಗಳ ಬಗ್ಗೆ ಹೇಳುವ ಹಾಗೆಯೇ ಇಲ್ಲ. ಇತ್ತೀಚೆಗೆ ವಿದ್ಯುತ್ ದರವನ್ನು ಹೆಚ್ಚಿಸಿದರು.

ಹಾಗೆಯೇ ಮದ್ಯದ ದರವನ್ನು ಏರಿಸಿದರು. ಎಷ್ಟು ಸಾಧ್ಯವೊ ಅಷ್ಟು ಕಡೆ ಜನರನ್ನು ಕಿತ್ತು ತಿನ್ನುವ ಕೆಲಸವನ್ನು ಈ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಸಚಿವರು ಕಿಡಿಕಾರಿದರು.

Author