ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಮೂರು ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ ಭೇದಿಸಿರುವ ಸೊರಬ ಪೊಲೀಸರು ಮಂಗಳವಾರ ಆರೋಪಿಯನ್ನು ಬಂಧಿಸಿದ್ದಾರೆ.
ತಾಲ್ಲೂಕಿನ ಜೇಡಗೇರಿ ಸಮೀಪದ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಾಲತೇಶ್ (35) ಬಂಧಿತ. ಕಾನಕೊಪ್ಪ ಹೊಸೂರು ಗ್ರಾಮದ ಈತ, ಅನೈತಿಕ ಸಂಬಂಧದ ಕಾರಣ ತಮ್ಮರಾಮಚಂದ್ರ (28)ನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಎನ್ನಲಾಗಿದೆ.
ರಾಮಚಂದ್ರ ಒಂದೂವರೆ ತಿಂಗಳಾದರೂ ಮನೆಗೆ ಬಾರದ ಕಾರಣ ಪೋಷಕರು ಸೆ.8ರಂದು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡಿದ್ದ ಪೊಲೀಸರು, ಅನುಮಾನದ ಮೇಲೆ ಮಾಲತೇಶ್‌ನನ್ನು ವಿಚಾರಣೆ ಮಾಡಿದಾಗ ಆತ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಆತನ ಮಾಹಿತಿ ಮೇರೆಗೆ ಜೇಡಗೇರಿಯ ತೋಟದಲ್ಲಿ ಹೂತು ಹಾಕಿದ್ದ ರಾಮಚಂದ್ರನ ಮೃತ ದೇಹವನ್ನು ಮಂಗಳವಾರ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



