ಶಿವಮೊಗ್ಗ, 2026-27ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ವಕೀಲ ವೃತ್ತಿಯ ಪ್ರಾಯೋಗಿಕ ತರಬೇತಿಯ ಜೊತೆಗೆ ಮಾಸಿಕ ತರಬೇತಿ ಭತ್ಯೆ ನೀಡುವ ‘ಪ್ರೋತ್ಸಾಹ ಧನ’ ಕಾರ್ಯಕ್ರಮದಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಈ ತರಬೇತಿಯು ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸಿದ್ದು, ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಪ್ರವರ್ಗವಾರು ನಿಗದಿಪಡಿಸಿದ ಗುರಿಗನುಗುಣವಾಗಿ ಮೆರಿಟ್ ಆಧಾರದ ಮೇಲೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ತರಬೇತಿ ಅವಧಿಯು 04 ವರ್ಷಗಳದ್ದಾಗಿದ್ದು, ಮಾಹೆಯಾನ ರೂ.4000/- ಗಳ ತರಬೇತಿ ಭತ್ಯೆ ನೀಡಲಾಗುವುದು. ಪ್ರವರ್ಗ 2ಎ, 3ಎ ಮತ್ತು 3ಬಿ ಗಳಿಗೆ ಕುಟುಂಬದ ಒಟ್ಟು ವಾರ್ಷಿಕ ಆದಾಯ ರೂ.2.50 ಲಕ್ಷ ಹಾಗೂ ಅಭ್ಯರ್ಥಿಯ ಗರಿಷ್ಟ ವಯೋಮಿತಿಯು ಪ್ರಕಟಣೆ ದಿನಾಂಕಕ್ಕೆ 30 ವರ್ಷಗಳನ್ನು ಮೀರಬಾರದು.
ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.3.50 ಲಕ್ಷ ಆದಾಯದ ಮಿತಿಯನ್ನು ನಿಗದಿಪಡಿಸಿದ್ದು ಅಭ್ಯರ್ಥಿಯ ಗರಿಷ್ಟ ವಯೋಮಿತಿಯು 31 ವರ್ಷಗಳು ಮೀರಿರಬಾರದು. ತರಬೇತಿಗೆ ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕಾನೂನು ಪರೀಕ್ಷೆಯಲ್ಲಿ ತೇರ್ಗಡೆಯಾಗಿ 2 ವರ್ಷ ಅವಧಿಯ ಒಳಗಿರಬೇಕು. ಹಾಗೂ ಬಾರ್ ಕೌನ್ಸಿಲ್ನಲ್ಲಿ ನೋಂದಣಿ ಮಾಡಿಸಿರಬೇಕು.
ಆಸಕ್ತರು ಅರ್ಜಿ ನಮೂನೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಡಿ.ದೇವರಾಜ ಅರಸು ಭವನ, ಬಾಲರಾಜ್ ಅರಸು ರಸ್ತೆ, ಕೆ.ಇ.ಬಿ.ಸರ್ಕಲ್, ಶಿವಮೊಗ್ಗ ಇಲ್ಲಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ನ.30 ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ: 08182-222129 ನ್ನು ಸಂಪರ್ಕಿಸಬಹುದೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
