ಶಿವಮೊಗ್ಗ ದೀಪಾವಳಿ ಹಬ್ಬದ ಸಂಭ್ರಮವನ್ನು ಸಮಾಜದ ವಿವಿಧ ವರ್ಗಗಳೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಜರಾಯಿ ಇಲಾಖೆ ವತಿಯಿಂದ ನೇಮಕಗೊಂಡಿರುವ ಅಧ್ಯಕ್ಷರಾದ ದೇವೇಂದ್ರಪ್ಪ ಅವರು ಎರಡು ಸಾಮಾಜಿಕ ಕಾರ್ಯಗಳ ಮೂಲಕ ಗಮನ ಸೆಳೆದಿದ್ದಾರೆ.

ನಿನ್ನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸುವ ಮೂಲಕ ಸೇವಾ ಕಾರ್ಯ ನಡೆಸಿದ್ದಾರೆ. ಇದರ ಮುಂದುವರಿದ ಭಾಗವಾಗಿ ಇಂದು ಖಾಸಗಿ ಹೋಟೆಲ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಕಾರ್ಮಿಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಬಾಗಿನದ ರೂಪದಲ್ಲಿ ಉಚಿತ ಸೀರೆಗಳನ್ನು ವಿತರಿಸಿ ಹಬ್ಬದ ಸಂತೋಷವನ್ನು ಹಂಚಿಕೊಂಡಿದ್ದಾರೆ.

ದೈನಂದಿನ ಬದುಕಿನಲ್ಲಿ ಶ್ರಮಿಸುತ್ತಿರುವ ಮಹಿಳಾ ಕಾರ್ಮಿಕರನ್ನು ಗುರುತಿಸಿ, ಹಬ್ಬದ ಸಂದರ್ಭದಲ್ಲಿ ಅವರ ಮುಖದಲ್ಲಿ ಸಂತೋಷ ಮೂಡಿಸುವ ಈ ಕಾರ್ಯವು ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾಗಿದೆ.

ಹಬ್ಬದ ಆಚರಣೆಯು ಕೇವಲ ವೈಯಕ್ತಿಕ ಸಂಭ್ರಮಕ್ಕೆ ಸೀಮಿತವಾಗದೆ, ಸಮಾಜದ ಎಲ್ಲ ವರ್ಗದವರೊಂದಿಗೆ ಸಂತೋಷ ಹಂಚಿಕೊಳ್ಳುವ ಮೂಲಕ ಅರ್ಥಪೂರ್ಣವಾಗಬೇಕು ಎಂಬ ಸಂದೇಶವನ್ನು ದೇವೇಂದ್ರಪ್ಪ ಅವರ ಈ ಕಾರ್ಯ ಸಾರಿದೆ.
