ತೀರ್ಥಹಳ್ಳಿ, ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ವತಿಯಿಂದ ಹೋಬಳಿ ಮಟ್ಟದ ಪ್ರಜಾ ಸೇವಾ ಅಭಿಯಾನವನ್ನು ಅಕ್ಟೋಬರ್ 31ರ ಶನಿವಾರ ಮೇಗರವಳ್ಳಿಯಲ್ಲಿ ಆಯೋಜಿಸಲಾಗಿದೆ.
ಮೇಗರವಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಅಭಿಯಾನ ನಡೆಯಲಿದ್ದು, ಗ್ರಾಮ ಪಂಚಾಯಿತಿ ಮೇಗರವಳ್ಳಿ ವತಿಯಿಂದ ಕಾರ್ಯಕ್ರಮದ ವ್ಯವಸ್ಥೆ ಮಾಡಲಾಗಿದೆ.ಅಭಿಯಾನದಡಿ ಸಾರ್ವಜನಿಕರಿಗೆ ವಿವಿಧ ಸರ್ಕಾರಿ ಸೇವೆಗಳ ಮಾಹಿತಿ ನೀಡುವುದು, ಅರ್ಜಿಗಳನ್ನು ಸ್ವೀಕರಿಸಿ ಪರಿಹಾರ ಕಲ್ಪಿಸುವುದು, ಸರ್ಕಾರದ ವಿವಿಧ ಸೌಲಭ್ಯಗಳನ್ನು ವಿತರಿಸುವುದು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಸಲಹೆ ನೀಡುವ ಕಾರ್ಯಗಳು ನಡೆಯಲಿವೆ.
“ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಎಂಬ ಆಶಯದೊಂದಿಗೆ ಆಯೋಜಿಸಿರುವ ಈ ಅಭಿಯಾನದ ಪ್ರಯೋಜನವನ್ನು ಹೋಬಳಿ ವ್ಯಾಪ್ತಿಯ ಸಾರ್ವಜನಿಕರು ಪಡೆದುಕೊಳ್ಳುವಂತೆ ಗ್ರಾಮ ಪಂಚಾಯಿತಿ ಮೇಗರವಳ್ಳಿ ತಿಳಿಸಿದೆ.
