ಶಿವಮೊಗ್ಗ,ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರಪರಿಸ್ಥಿತಿ, ಬೆಳೆ ಪರಿಹಾರ ವಿಳಂಬ ಹಾಗೂ ರೈತರ ಸಂಕಷ್ಟಗಳಿಗೆ ಧ್ವನಿಯಾಗುವ ಉದ್ದೇಶದಿಂದ ಹಮ್ಮಿಕೊಂಡಿರುವ ಮಹತ್ವದ ‘ರೈತ ಸ್ವಾಭಿಮಾನಿ ಯಾತ್ರೆ’ಯ ಅಂಗವಾಗಿ ಜನತಾ ದಳ (ಎಸ್) ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಶಿವಮೊಗ್ಗ ನಗರಕ್ಕೆ ಭೇಟಿ ನೀಡಿದ್ದಾರೆ .ನಗರಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಅವರಿಗೆ ಮಾಜಿ ಶಾಸಕ ಪ್ರಸನ್ನ ಕುಮಾರ್ ಅವರು ಪಟಾಕಿ ಸಿಡಿಸಿ, ಹೂಗುಚ್ಛ ನೀಡಿ ಅದ್ದೂರಿಯಾಗಿ ಹಾಗೂ ಆತ್ಮೀಯವಾಗಿ ಸ್ವಾಗತಿಸಿದರು.

ವಿನೋಬನಗರದಿಂದ ಬೈಕ್ ರ್ಯಾಲಿ ಮೂಲಕ ಯುವ ನಾಯಕನನ್ನು ಬರಮಾಡಿಕೊಂಡರು.ಪಕ್ಷದ ಮುಖಂಡರು ಮತ್ತು ಸಾವಿರಾರು ಯುವ ಕಾರ್ಯಕರ್ತರು ಉತ್ಸಾಹದಿಂದ ಈ ಬೈಕ್ ರ್ಯಾಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು .ಈ ಪ್ರವಾಸದ ವೇಳೆ ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ವಿವಿಧ ಜನಪರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ರೈತರ ಅಳಲಿಗೆ ಸ್ಪಂದಿಸುವುದರ ಜೊತೆಗೆ, ಕಳಕಳಿ ಕಳೆದುಕೊಳ್ಳುತ್ತಿರುವ ರೈತ ಸಮುದಾಯಕ್ಕೆ ಧೈರ್ಯ ತುಂಬುವ ಮತ್ತು ಕಾರ್ಯಕರ್ತರಲ್ಲಿ ಹೊಸ ಉತ್ಸಾಹವನ್ನು ಜಾಗೃತಗೊಳಿಸುವ ಮೂಲಕ ಪಕ್ಷ ಸಂಘಟನೆಗೆ ಬಲ ತುಂಬುವ ಪ್ರಮುಖ ಉದ್ದೇಶ ಈ ಯಾತ್ರೆಯದ್ದಾಗಿದೆ.
ಯುವ ನಾಯಕನ ಈ ಅನಿರೀಕ್ಷಿತ ಆಗಮನದಿಂದ ಸ್ಥಳೀಯ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿದ್ದು, ಮುಂಬರುವ ದಿನಗಳಲ್ಲಿ ರೈತರ ಪರ ಹೋರಾಟಗಳು ಹಾಗೂ ಪಕ್ಷ ಸಂಘಟನೆಯ ಚಟುವಟಿಕೆಗಳಿಗೆ ಮತ್ತಷ್ಟು ವೇಗ ದೊರೆಯಲಿದೆ ಎಂದು ಪಕ್ಷದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರದ ರೈತ ವಿರೋಧಿ ಧೋರಣೆಗಳನ್ನು ಖಂಡಿಸುತ್ತಾ, ಬರಪರಿಸ್ಥಿತಿಯಲ್ಲಿ ಪರಿಹಾರ ವಿತರಿಸುವಂತೆ ಆಗ್ರಹಿಸಿ ಕೈಗೊಂಡಿರುವ ಈ ಯಾತ್ರೆಯು ಹತಾಶರಾಗಿರುವ ರೈತರಲ್ಲಿ ಹೊಸ ಭರವಸೆಯ ಕಿಚ್ಚು ಹೊತ್ತಿಸುವ ಮೂಲಕ ಅವರಲ್ಲಿ ಕುರಿತುಂಬಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ.
