ಭಾರತ್ ಜೋಡೋ 2.0 ಪಾದಯಾತ್ರೆ : ಶಿಕಾರಿಪುರದಿಂದ ಮೊಳಗಿದ ಕಾಂಗ್ರೆಸ್ ರಣಕಹಳೆ; ಜಿಲ್ಲೆಯ ಕಾರ್ಯಕರ್ತರಲ್ಲಿ ಹೊಸ ಹುರುಪು

ಶಿವಮೊಗ್ಗ

ಶಿವಮೊಗ್ಗ,ಕಾಂಗ್ರೆಸ್ ಪಕ್ಷದ ಸಂಘಟನೆ ಬಲಪಡಿಸುವ ಹಾಗೂ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಶಿಕಾರಿಪುರದಲ್ಲಿ ಆಯೋಜನೆಗೊಂಡ ‘ಭಾರತ್ ಜೋಡೋ 2.0’ ಪಾದಯಾತ್ರೆ ಕಾಂಗ್ರೆಸ್ ಪಾಲಿಗೆ ಮಹತ್ವದ ರಾಜಕೀಯ ಕಾರ್ಯಕ್ರಮವಾಗಿ ಗಮನ ಸೆಳೆಯಿತು.

ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿನಿಧಿಸುವ ಶಿಕಾರಿಪುರ ಕ್ಷೇತ್ರದಿಂದಲೇ ರಾಜ್ಯಮಟ್ಟದ ಯಾತ್ರೆಗೆ ಚಾಲನೆ ದೊರೆತಿರುವುದು ಕಾರ್ಯಕ್ರಮಕ್ಕೆ ವಿಶೇಷ ರಾಜಕೀಯ ಮಹತ್ವ ತಂದುಕೊಟ್ಟಿತು.ಆದರೆ, ಈ ಕಾರ್ಯಕ್ರಮದ ಯಶಸ್ಸಿನ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಶ್ರೀ ಮಧು ಬಂಗಾರಪ್ಪ ಅವರ ಸಂಘಟನಾ ಮುತುವರ್ಜಿ ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸುವ ಪ್ರಯತ್ನವೂ ಪ್ರಮುಖವಾಗಿ ಕಾಣಿಸಿಕೊಂಡಿತು.

2022ರಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಕರ್ನಾಟಕ ಪ್ರವೇಶಿಸಿದ ಸೆ.30ರ ಸವಿ ನೆನಪಿನಲ್ಲಿ, ರಾಜ್ಯದ 84 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಲು ಉದ್ದೇಶಿಸಿರುವ ‘ಭಾರತ್ ಜೋಡೋ 2.0’ ಯಾತ್ರೆಗೆ ಶಿಕಾರಿಪುರದಿಂದ ಅದ್ಧೂರಿ ಚಾಲನೆ ದೊರೆಯಿತು. ಮುಂದಿನ ಕ್ಷೇತ್ರಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ಮಾದರಿಯಾಗುವ ರೀತಿಯಲ್ಲಿ ಶಿಕಾರಿಪುರದಲ್ಲಿ ಸಂಘಟನೆ ಮತ್ತು ಕಾರ್ಯಕರ್ತರ ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡಲಾಗಿತ್ತು.

ಶಿಕಾರಿಪುರ ಆಯ್ಕೆಯ ಹಿಂದೆ ಮಧು ಬಂಗಾರಪ್ಪ‘ಭಾರತ್ ಜೋಡೋ 2.0’ ಯಾತ್ರೆಯನ್ನು ಮಂಗಳೂರಿನಿಂದ ಆರಂಭಿಸುವ ಚಿಂತನೆ ಇದ್ದ ಸಂದರ್ಭದಲ್ಲಿ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಶಿಕಾರಿಪುರದಿಂದಲೇ ಯಾತ್ರೆಗೆ ಚಾಲನೆ ನೀಡಬೇಕು ಎಂಬ ನಿಲುವನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ಮನ್ನಣೆಯೂ ಸಿಕ್ಕು ಕಾರ್ಯಕರ್ಯಮ ಅಭೂತಪೂರ್ವ ಯಶಸ್ಸು ಕಂಡಿದೆ.

ಬಿಜೆಪಿ ರಾಜ್ಯಾಧ್ಯಕ್ಷರು ಪ್ರತಿನಿಧಿಸುವ ಕ್ಷೇತ್ರದಿಂದಲೇ ಕಾಂಗ್ರೆಸ್‌ನ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದೆ. ಜೊತೆಗೆ ರಾಜ್ಯಕ್ಕೆ ರಾಜಕೀಯವಾಗಿ ಮಹತ್ವದ ಸಂದೇಶ ರವಾನೆಯಾಗಿದೆ. ಕಿಟ್ಟದಹಳ್ಳಿಯಿಂದ ಆರಂಭವಾದ ಪಾದಯಾತ್ರೆ ಸುಮಾರು 10 ಕಿ.ಮೀ ಸಾಗಿ ಶಿಕಾರಿಪುರ ಪಟ್ಟಣದವರೆಗೆ ಸಾಗಿತು. ರಾಜ್ಯಮಟ್ಟದ ನಾಯಕರು, ಸಚಿವರು, ಸ್ಥಳೀಯ ಮುಖಂಡರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಹೆಜ್ಜೆ ಹಾಕಿದರು.ಕಾರ್ಯಕರ್ತರಲ್ಲಿ ಹೊಸ ಹುರುಪುಪಾದಯಾತ್ರೆಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕಂಡುಬಂದ ಉತ್ಸಾಹ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

ಬಹುಕಾಲದಿಂದ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಚಿವ ಮಧು ಬಂಗಾರಪ್ಪ ಅವರು ನಿರಂತರವಾಗಿ ಸಂಪರ್ಕದಲ್ಲಿದ್ದು, ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸುವಂತೆ ಸಂಘಟನಾ ಮಟ್ಟದಲ್ಲಿ ಪ್ರಯತ್ನ ನಡೆಸಿದರು.ಸ್ವತಃ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಸಚಿವರು ಕಾರ್ಯಕರ್ತರೊಂದಿಗೆ ಬೆರೆತು ಸಾಗಿದರು. ಇದರಿಂದ ಸ್ಥಳೀಯ ಕಾರ್ಯಕರ್ತರಲ್ಲೂ ಹೊಸ ಹುರುಪು ಮೂಡಿತು.“ನಾಯಕರು ವೇದಿಕೆಯಲ್ಲಿ ಮಾತ್ರ ಕಾಣಿಸಿಕೊಳ್ಳದೆ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಬೇಕು” ಎಂಬ ಸಂಘಟನಾ ಸಂದೇಶವನ್ನು ಮಧು ಬಂಗಾರಪ್ಪ ಅವರು ತಮ್ಮ ನಡೆ ಮೂಲಕ ತೋರಿಸಿಕೊಟ್ಟರು.

ಕಾರ್ಯಕ್ರಮದ ಸಿದ್ಧತೆಗೂ ಮುತುವರ್ಜಿಕಿಟ್ಟದಹಳ್ಳಿಯಿಂದ ಶಿಕಾರಿಪುರದವರೆಗೆ ಪಾದಯಾತ್ರೆ ಯಶಸ್ವಿಯಾಗಿ ಸಾಗುವುದರ ಜೊತೆಗೆ ಸಂತೆ ಮೈದಾನದಲ್ಲಿ ನಡೆದ ಬೃಹತ್ ಬಹಿರಂಗ ಸಭೆಯೂ ಅಚ್ಚುಕಟ್ಟಾಗಿ ನಡೆಯಿತು.ರಾಜ್ಯಮಟ್ಟದ ನಾಯಕರು ಭಾಗವಹಿಸಿದ್ದ ಕಾರ್ಯಕ್ರಮವಾಗಿದ್ದರಿಂದ ಸ್ಥಳೀಯ ಸಂಘಟನೆ, ಕಾರ್ಯಕರ್ತರ ಸಮನ್ವಯ, ವೇದಿಕೆ ವ್ಯವಸ್ಥೆ, ಜನರ ಭಾಗವಹಿಸುವಿಕೆ ಸೇರಿದಂತೆ ಹಲವು ಹಂತಗಳಲ್ಲಿ ಸಿದ್ಧತೆ ಅಗತ್ಯವಿತ್ತು.

ಈ ಎಲ್ಲಾ ವಿಚಾರಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಧು ಬಂಗಾರಪ್ಪ ಅವರು ಮುತುವರ್ಜಿ ವಹಿಸಿ, ಕಾರ್ಯಕ್ರಮ ನಡೆಯುವ ಎರಡು ದಿನ ಮುಂಚಿತವಾಗಿ ಸ್ಥಳ ಪರಿಶೀಲನೆ ಮತ್ತು ಸಿದ್ಧತೆ ಪರಿಶೀಲಿಸಿದ್ದು ಅವರ ಕಾಳಜಿಗೆ ಸಾಕ್ಷಿಯಾಗಿತ್ತು.ಕಾರ್ಯಕ್ರಮದ ಯಶಸ್ಸು ಕೇವಲ ಜನಸಂಖ್ಯೆಯ ದೃಷ್ಟಿಯಿಂದ ಮಾತ್ರವಲ್ಲದೆ, ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಸಂಘಟನೆಗೆ ಹೊಸ ಚೈತನ್ಯ ತುಂಬಿದ ಕಾರ್ಯಕ್ರಮ ಎಂಬ ದೃಷ್ಟಿಯಿಂದಲೂ ಗಮನ ಸೆಳೆಯಿತು.

ಶಿಕಾರಿಪುರದಿಂದ ‘ಶಿಕಾರಿ’ ಆರಂಭಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸ್ವಕ್ಷೇತ್ರ ಶಿಕಾರಿಪುರದಿಂದಲೇ ಕಾಂಗ್ರೆಸ್‌ನ ‘ಭಾರತ್ ಜೋಡೋ 2.0’ ಪಾದಯಾತ್ರೆ ಆರಂಭವಾಗಿರುವುದು ಸಹಜವಾಗಿಯೇ ರಾಜಕೀಯ ಚರ್ಚೆಗೆ ಕಾರಣವಾಗಿದೆ. “ಶಿಕಾರಿಪುರದಿಂದ ರಾಜಕೀಯ ಶಿಕಾರಿ ಆರಂಭ” ಎಂಬ ಸಚಿವ ಮಧು ಬಂಗಾರಪ್ಪ ಅವರ ಅಬ್ಬರದ ಭಾಷಣ ಮುಂಬರುವ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದೆ.ಇದು ಕೇವಲ ಒಂದು ದಿನದ ಕಾರ್ಯಕ್ರಮವಾಗಿ ಉಳಿಯದೆ, 84 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆ ಬಲಪಡಿಸುವ ಪ್ರಯತ್ನದ ಮೊದಲ ಹೆಜ್ಜೆಯಾಗಿ ಪರಿಗಣಿಸಲ್ಪಟ್ಟಿದೆ.

ಮಧು ಬಂಗಾರಪ್ಪ ಅವರ ಸಂಘಟನಾ ಸಾಮರ್ಥ್ಯಕ್ಕೆ ಮತ್ತೊಂದು ಉದಾಹರಣೆಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಧು ಬಂಗಾರಪ್ಪ ಅವರು ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ನೀಡುತ್ತಿರುವ ಆದ್ಯತೆ ‘ಭಾರತ್ ಜೋಡೋ 2.0’ ಕಾರ್ಯಕ್ರಮದ ಮೂಲಕ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.ವಿಶೇಷವಾಗಿ, ಬಿಜೆಪಿ ಪ್ರಾಬಲ್ಯದ ಕ್ಷೇತ್ರದಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿರುವುದು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ “ನಾವೂ ಸಂಘಟಿತರಾಗಿ ಹೋರಾಡಬಹುದು” ಎಂಬ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಮುಂದಿನ 83 ಕ್ಷೇತ್ರಗಳಿಗೂ ಶಿಕಾರಿಪುರ ಮಾದರಿ‘ಭಾರತ್ ಜೋಡೋ 2.0’ ಯಾತ್ರೆ ಮುಂದಿನ ದಿನಗಳಲ್ಲಿ ರಾಜ್ಯದ ಇತರ ಕ್ಷೇತ್ರಗಳಿಗೂ ವಿಸ್ತರಿಸಲಿದೆ. ಹೀಗಾಗಿ ಶಿಕಾರಿಪುರದಲ್ಲಿ ನಡೆದ ಮೊದಲ ಕಾರ್ಯಕ್ರಮದ ಸಂಘಟನಾ ಮಾದರಿ ಮುಂದಿನ ಕಾರ್ಯಕ್ರಮಗಳ ಮೇಲೂ ಸಹಜವಾಗಿಯೇ ಗಮನ ಸೆಳೆದಿದೆ.ಒಟ್ಟಿನಲ್ಲಿ, ‘ಭಾರತ್ ಜೋಡೋ 2.0’ ಪಾದಯಾತ್ರೆ ಶಿಕಾರಿಪುರದಲ್ಲಿ ಯಶಸ್ವಿಯಾಗಿ ಆರಂಭವಾಗುವುದರ ಹಿಂದೆ ರಾಜ್ಯಮಟ್ಟದ ನಾಯಕರ ಭಾಗವಹಿಸುವಿಕೆಯಷ್ಟೇ ಅಲ್ಲದೆ, ಸ್ಥಳೀಯ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಿ, ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಸಂಘಟನಾ ಮುತುವರ್ಜಿಯೂ ಪ್ರಮುಖವಾಗಿ ಕಾಣಿಸಿಕೊಂಡಿದೆ.

ಶಿಕಾರಿಪುರದಲ್ಲಿ ಮೊಳಗಿದ ಕಾಂಗ್ರೆಸ್ ರಣಕಹಳೆ ಇದೀಗ ಜಿಲ್ಲೆಯ ಇತರ ಕ್ಷೇತ್ರಗಳಲ್ಲೂ ಸಂಘಟನೆಯ ಹೊಸ ಚೈತನ್ಯಕ್ಕೆ ಕಾರಣವಾಗುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಗಮನ ಸೆಳೆಯಲಿದೆ.

Author