ಮಲೆನಾಡಿನ ಕುಗ್ರಾಮಗಳಿಗೂ 4G ನೆಟ್ವರ್ಕ್ : BSNL ಟವರ್ ಕಾಮಗಾರಿಗಳನ್ನು ತ್ವರಿತಗೊಳಿಸಲು ಸಂಸದ ಬಿ.ವೈ. ರಾಘವೇಂದ್ರ ಕಟ್ಟುನಿಟ್ಟಿನ ಸೂಚನೆ

ಶಿವಮೊಗ್ಗ

ಶಿವಮೊಗ್ಗ, ಲೋಕಸಭಾ ಕ್ಷೇತ್ರದ ಗ್ರಾಮೀಣ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಮೊಬೈಲ್ ಮತ್ತು ದೂರವಾಣಿ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ಇಂದು ಶಿವಮೊಗ್ಗ ಲೋಕಸಭಾ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ BSNL ಅಧಿಕಾರಿಗಳೊಂದಿಗೆ ಮಹತ್ವದ ಪರಿಶೀಲನಾ ಸಭೆ ನಡೆಯಿತು.ಸಭೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 4G BSNL ಮೊಬೈಲ್ ಟವರ್‌ಗಳ ಮಂಜೂರಾತಿ, ನಿರ್ಮಾಣ, ಪ್ರಗತಿಯಲ್ಲಿರುವ ಕಾಮಗಾರಿಗಳು, ತಿರಸ್ಕೃತಗೊಂಡಿರುವ ಟವರ್‌ಗಳ ಪ್ರಸ್ತಾವನೆಗಳು, ಭಾರತ್‌ನೆಟ್ ಯೋಜನೆ, ಗ್ರಾಮ ಪಂಚಾಯಿತಿಗಳಿಗೆ ನೆಟ್‌ವರ್ಕ್ ಸಂಪರ್ಕ, ಹೊಸ ಮೊಬೈಲ್ ಟವರ್‌ಗಳ ಅಳವಡಿಕೆ ಹಾಗೂ ಕಾಮಗಾರಿಗಳ ಅನುಷ್ಠಾನದಲ್ಲಿರುವ ಸಮಸ್ಯೆಗಳ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಲಾಯಿತು.

ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಇನ್ನೂ ಸಮರ್ಪಕ ಮೊಬೈಲ್ ನೆಟ್‌ವರ್ಕ್ ಲಭ್ಯವಾಗದಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿಗಳು, ನ್ಯಾಯಬೆಲೆ ಅಂಗಡಿಗಳು, ಶಾಲೆಗಳು, ಅಂಗನವಾಡಿ ಕೇಂದ್ರಗಳು, ಸಣ್ಣ ವ್ಯಾಪಾರಸ್ಥರು ಹಾಗೂ ವಿವಿಧ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವ ಜನರಿಗೆ ಆನ್‌ಲೈನ್ ಸೇವೆಗಳು ಮತ್ತು ಡಿಜಿಟಲ್ ಸಂಪರ್ಕದ ಕೊರತೆಯಿಂದ ಸಮಸ್ಯೆಯಾಗುತ್ತಿದೆ. ಸರ್ಕಾರದ ವಿವಿಧ ಸೇವೆಗಳು ಡಿಜಿಟಲ್ ವ್ಯವಸ್ಥೆಯ ಮೂಲಕ ಲಭ್ಯವಾಗುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ನೆಟ್‌ವರ್ಕ್ ಸೌಲಭ್ಯ ಕಲ್ಪಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಸಂಸದರು ಅಧಿಕಾರಿಗಳ ಗಮನಕ್ಕೆ ತಂದರು.

398 ಗ್ರಾಮಗಳಿಗೆ ಪ್ರಸ್ತಾವನೆ – 232 ಗ್ರಾಮಗಳಿಗೆ ಮಂಜೂರಾತಿಶಿವಮೊಗ್ಗ ಲೋಕಸಭಾ ಕ್ಷೇತ್ರದ ನೆಟ್‌ವರ್ಕ್ ಕೊರತೆಯಿರುವ ಗ್ರಾಮಗಳನ್ನು ಗುರುತಿಸಿ ಒಟ್ಟು 398 ಗ್ರಾಮಗಳಲ್ಲಿ 4G ಮೊಬೈಲ್ ಟವರ್‌ಗಳ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಪೈಕಿ 232 ಗ್ರಾಮಗಳಿಗೆ ಮಂಜೂರಾತಿ ದೊರೆತಿದೆ. 148 ಗ್ರಾಮಗಳ ಪ್ರಸ್ತಾವನೆಗಳು ತಿರಸ್ಕೃತಗೊಂಡಿರುವುದರಿಂದ, ಆ ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಮುಂದುವರಿದಿದೆ.ತಿರಸ್ಕೃತಗೊಂಡಿರುವ ಮತ್ತು ನೆಟ್ ವರ್ಕ್ ಸಿಗ್ನಲ್ ಬಹಳ ವೀಕ್ ಆಗಿ ಸಿಗುತ್ತಿರುವ 148 ಗ್ರಾಮಗಳ ಪ್ರಸ್ತಾವನೆಗಳನ್ನು ಮತ್ತೊಮ್ಮೆ ಸ್ಥಳೀಯ ಪರಿಸ್ಥಿತಿಯ ಆಧಾರದ ಮೇಲೆ ಪರಿಶೀಲಿಸಿ, ಅಗತ್ಯವಿರುವ ಕಡೆ ಮರುಪ್ರಸ್ತಾವನೆ ಸಲ್ಲಿಸುವಂತೆ ಸಂಸದರು BSNL ಅಧಿಕಾರಿಗಳಿಗೆ ಸೂಚಿಸಿದರು.

ಕೇವಲ ತಾಂತ್ರಿಕ ಅಥವಾ ಆಡಳಿತಾತ್ಮಕ ಕಾರಣಗಳಿಂದ ಗ್ರಾಮಗಳು ನೆಟ್‌ವರ್ಕ್ ಸೌಲಭ್ಯದಿಂದ ವಂಚಿತವಾಗಬಾರದು. ಪ್ರತಿಯೊಂದು ಗ್ರಾಮದಲ್ಲಿನ ನೈಜ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ನಿರ್ದೇಶನ ನೀಡಿದರು.ಮಲೆನಾಡಿನ ಕುಗ್ರಾಮಗಳಿಗೂ ಸಮರ್ಪಕ ಸಂಪರ್ಕವಿಶೇಷವಾಗಿ ತೀರ್ಥಹಳ್ಳಿ, ಹೊಸನಗರ, ಸಾಗರ ಮತ್ತು ಸೊರಬ ತಾಲ್ಲೂಕುಗಳ ಮಲೆನಾಡು ಹಾಗೂ ಗ್ರಾಮೀಣ ಪ್ರದೇಶಗಳು ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕುಗ್ರಾಮಗಳಲ್ಲಿ ಭೌಗೋಳಿಕ ಹಾಗೂ ಗುಡ್ಡಗಾಡು ಪ್ರದೇಶಗಳ ಕಾರಣದಿಂದ ಉಂಟಾಗುತ್ತಿರುವ ನೆಟ್‌ವರ್ಕ್ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸುವಂತೆ ಸಂಸದರು ಸೂಚಿಸಿದರು.

“ನಗರ ಪ್ರದೇಶಗಳಿಗೆ ಸೀಮಿತವಾಗದೆ, ಮಲೆನಾಡಿನ ಕೊನೆಯ ಹಳ್ಳಿಯಲ್ಲಿರುವ ಸಾಮಾನ್ಯ ನಾಗರಿಕನಿಗೂ ಉತ್ತಮ ಮೊಬೈಲ್ ನೆಟ್‌ವರ್ಕ್ ಸೌಲಭ್ಯ ದೊರೆಯಬೇಕು. ಸಂಪರ್ಕ ವ್ಯವಸ್ಥೆ ಇಂದು ಮೂಲಭೂತ ಅಗತ್ಯವಾಗಿದೆ. ವಿದ್ಯಾರ್ಥಿಗಳ ಶಿಕ್ಷಣದಿಂದ ಹಿಡಿದು ರೈತರ ಮಾಹಿತಿ, ಸರ್ಕಾರಿ ಸೇವೆಗಳು, ಡಿಜಿಟಲ್ ಪಾವತಿ ಹಾಗೂ ತುರ್ತು ಸಂದರ್ಭಗಳಲ್ಲಿ ಸಂಪರ್ಕ ಸಾಧಿಸುವವರೆಗೆ ಪ್ರತಿಯೊಂದು ಕ್ಷೇತ್ರಕ್ಕೂ ನೆಟ್‌ವರ್ಕ್ ಅಗತ್ಯವಾಗಿದೆ” ಎಂದು ಶ್ರೀ ಬಿ.ವೈ. ರಾಘವೇಂದ್ರ ಅವರು ಅಧಿಕಾರಿಗಳಿಗೆ ತಿಳಿಸಿದರು.

ಇನ್ನೂ 14 ಹೊಸ ಟವರ್ ಗಳ ನಿರ್ಮಾಣಕ್ಕೆ ಮಂಜೂರಾತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಸೊರಬ ತಾಲ್ಲೂಕಿನ 6, ಹೊಸನಗರ ತಾಲ್ಲೂಕಿನ 4, ತೀರ್ಥಹಳ್ಳಿ ತಾಲ್ಲೂಕಿನ 3 ಹಾಗೂ ಸಾಗರ ತಾಲ್ಲೂಕಿನ 1 ಗ್ರಾಮಕ್ಕೆ ನೆಟ್ ವರ್ಕ್ ಸೌಲಭ್ಯದ ಕೊರತೆಯಿದ್ದು, ಈ ಗ್ರಾಮಗಳಿಗೆ ಹೊಸದಾಗಿ 4ಜಿ ಬಿ.ಎಸ್.ಎನ್.ಎಲ್ ಟವರ್ ಗಳನ್ನು ಮಂಜೂರು ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಕಳುಹಿಸಿದ್ದು, ಮಂಜೂರಾತಿ ನಿರೀಕ್ಷೆಯಿದೆ ಎಂದು ತಿಳಿಸಿದೆ. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆಮಂಜೂರಾತಿ ದೊರೆತಿರುವ ಟವರ್‌ಗಳ ನಿರ್ಮಾಣ ಕಾಮಗಾರಿಗಳಲ್ಲಿ ವಿಳಂಬವಾಗದಂತೆ, ಪ್ರಗತಿಯಲ್ಲಿರುವ ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಟವರ್ ನಿರ್ಮಾಣಕ್ಕೆ ಅಗತ್ಯವಿರುವ ಜಾಗ, ವಿದ್ಯುತ್ ಸಂಪರ್ಕ, ತಾಂತ್ರಿಕ ಸಮಸ್ಯೆಗಳು, ಉಪಕರಣಗಳ ಅಳವಡಿಕೆ, ಅನುಮತಿಗಳು ಸೇರಿದಂತೆ ಯಾವುದೇ ಆಡಳಿತಾತ್ಮಕ ಅಡಚಣೆಗಳಿದ್ದಲ್ಲಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಶೀಘ್ರವಾಗಿ ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಭಾರತ್‌ನೆಟ್ ಮತ್ತು ಗ್ರಾಮ ಪಂಚಾಯಿತಿಗಳ ಸಂಪರ್ಕಕ್ಕೂ ಆದ್ಯತೆಸಭೆಯಲ್ಲಿ ಭಾರತ್‌ನೆಟ್ ಯೋಜನೆಯ ಪ್ರಗತಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ವೇಗದ ಇಂಟರ್ನೆಟ್ ಸಂಪರ್ಕ ಕಲ್ಪಿಸುವ ಕುರಿತು ಸಹ ವಿವರವಾಗಿ ಚರ್ಚಿಸಲಾಯಿತು.

ಗ್ರಾಮ ಪಂಚಾಯಿತಿಗಳು, ಶಾಲೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ಇತರ ಸರ್ಕಾರಿ ಸಂಸ್ಥೆಗಳಿಗೆ ಸಮರ್ಪಕ ಡಿಜಿಟಲ್ ಸಂಪರ್ಕ ಕಲ್ಪಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಇ-ಆಡಳಿತ ಮತ್ತು ಆನ್‌ಲೈನ್ ಸೇವೆಗಳಿಗೆ ಉತ್ತೇಜನ ನೀಡುವ ಅಗತ್ಯವನ್ನು ಸಂಸದರು ಒತ್ತಿ ಹೇಳಿದರು.ಜಿಲ್ಲೆಯಲ್ಲಿ ಉತ್ತಮ ನೆಟ್‌ವರ್ಕ್ ವ್ಯವಸ್ಥೆ ಕಲ್ಪಿಸಲು ಯಾವ ಪ್ರದೇಶಗಳಲ್ಲಿ ಹೊಸ ಟವರ್‌ಗಳ ಅಗತ್ಯವಿದೆ, ಯಾವ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಾಮರ್ಥ್ಯ ಹೆಚ್ಚಿಸಬೇಕಿದೆ, ಯಾವ ಕಾಮಗಾರಿಗಳು ಯಾವ ಹಂತದಲ್ಲಿವೆ ಮತ್ತು ಯಾವ ಸಮಸ್ಯೆಗಳಿಂದ ವಿಳಂಬವಾಗುತ್ತಿದೆ ಎಂಬುದರ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿಯನ್ನು ಪಡೆದು ಪರಿಶೀಲಿಸಲಾಯಿತು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಯಾವುದೇ ಗ್ರಾಮವೂ “ನೆಟ್‌ವರ್ಕ್ ಇಲ್ಲದ ಗ್ರಾಮ” ಎಂಬ ಸಮಸ್ಯೆಯನ್ನು ಎದುರಿಸದಂತೆ ಅಗತ್ಯ ಕ್ರಮಗಳನ್ನು ಹಂತ ಹಂತವಾಗಿ ಕೈಗೊಳ್ಳಬೇಕು. ಜನರಿಗೆ ಉತ್ತಮ ಸಂಪರ್ಕ ವ್ಯವಸ್ಥೆ ಒದಗಿಸುವುದು ಅಭಿವೃದ್ಧಿಯ ಪ್ರಮುಖ ಭಾಗವಾಗಿದ್ದು, ಈ ಕಾರ್ಯದಲ್ಲಿ ಯಾವುದೇ ರೀತಿಯ ವಿಳಂಬಕ್ಕೆ ಅವಕಾಶ ನೀಡಬಾರದು ಎಂದು ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.

Author