ಶಿವಮೊಗ್ಗ | ಅಡಿಕೆ ಬೇಯಿಸುವಾಗ ಹಂಡೆಯೊಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ದುರ್ಮರಣ

ಅವಘಡ ದುರಂತ

ಶಿವಮೊಗ್ಗ, ಅಡಿಕೆ ಬೇಯಿಸುವ ವೇಳೆ ಹಂಡೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ನಗರದ ವಡ್ಡಿನಕೊಪ್ಪದಲ್ಲಿ ಘಟನೆ ನಡೆದಿತ್ತು.

ವಡ್ಡಿನಕೊಪ್ಪದ ರುದ್ರಪ್ಪ ಅವರ ಪುತ್ರ ಜೇನು ಕುಮಾರ್ ಸೆಪ್ಟೆಂಬರ್‌ 8ರಂದು ತಮ್ಮ ಮನೆ ಬಳಿ ಶೆಡ್‌ನಲ್ಲಿ ಅಡಿಕೆ ಬೇಯಿಸುತ್ತಿದ್ದರು. ಅಡಿಕೆ ಹೊರತೆಗೆದ ಬಳಿಕ ಹಂಡೆಯಲ್ಲಿದ್ದ ಅಡಿಕೆ ಚೊಗರು ತೆಗೆಯುತ್ತಿದ್ದ ವೇಳೆ ಕಾಲು ಜಾರಿ ಹಂಡೆಯೊಳಗೆ ಬಿದ್ದಿದ್ದರು.

ಜೇನು ಕುಮಾರ್‌ ಅವರು ಅಡಿಕೆ ಹಂಡೆಯೊಳಗೆ ಬಿದ್ದ ದೃಶ್ಯ ಶೆಡ್‌ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಡಿಕೆ ಚೊಗರು ತೆಗೆಯಲು ಹಂಡೆ ಪಕ್ಕದ ಕಟ್ಟೆ ಏರಿದ್ದರು. ಈ ವೇಳೆ ಆಯಾತಪ್ಪಿ ಹಂಡೆಯೊಳಗೆ ಬಿದ್ದಿದ್ದಾರೆ. ಪಕ್ಕದಲ್ಲಿಯೇ ಇದ್ದ ಇತರೆ ಮೂವರು ಕೂಡಲೆ ಅವರನ್ನು ಮೇಲಕ್ಕೆತ್ತಿದ್ದಾರೆ. ಬಳಿಕ ಜೇನು ಕುಮಾರ್‌ ಶೆಡ್‌ನಿಂದ ಹೊರಗೆ ಓಡಿದ್ದರು. ಶರ್ಟ್‌ ತೆಗೆದು ಪುನಃ ಶೆಡ್‌ ಒಳಗೆ ಬಂದಿದ್ದಾರೆ.

ಅಷ್ಟು ಹೊತ್ತಿಗೆ ಅವರ ದೇಹದ ಬಹುತೇಕ ಭಾಗ ಸುಟ್ಟು ಹೋಗಿತ್ತು.ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆ ವೈದ್ಯರ ಸಲಹೆಯಂತೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ತುಂಗಾ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Author