ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ ನಿಧನಕ್ಕೆ ಸಚಿವ ಮಧು ಬಂಗಾರಪ್ಪ ತೀವ್ರ ಸಂತಾಪ

ಬೆಂಗಳೂರು

ಖ್ಯಾತ ರಂಗ ನಿರ್ದೇಶಕ, ಸಮಾಜಮುಖಿ ಚಿಂತಕ, ಶಿವಮೊಗ್ಗ ಜಿಲ್ಲೆಯ ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ ಅವರ ನಿಧನ ಸುದ್ದಿ ಆಘಾತ ಉಂಟು ಮಾಡಿದ್ದು ನಾಡಿನ ರಂಗಭೂಮಿ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟವಾದಂತಾಗಿದೆ.ದೆಹಲಿಯ ಎನ್‌ಎಸ್‌ಡಿ ಯಲ್ಲಿ ತರಬೇತಿ ಪಡೆದು ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪ್ರಾಧ್ಯಾಪಕರಾಗಿ, ಹೆಗ್ಗೋಡಿನ ನೀನಾಸಂನ ರಂಗ ಶಿಕ್ಷಣ ಕೇಂದ್ರ ಮತ್ತು ಸಾಣೇಹಳ್ಳಿಯ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿ ಹಾಗೂ ಮೈಸೂರು ರಂಗಾಯಣದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದ ಚಿದಂಬರರಾವ್ ತಮ್ಮ ಬದುಕನ್ನೇ ರಂಗಭೂಮಿಗಾಗಿ ಮುಡಿಪಾಗಿಟ್ಟಿದ್ದ ಸಾಧಕರು.

ದೇಶದ ಅನೇಕ ಪ್ರಖ್ಯಾತ ರಂಗತಂಡಗಳಿಗೆ ನಾಟಕಗಳನ್ನು ನಿರ್ದೇಶಿಸಿದ್ದರು. ಗಾಂಧಿವಾದಿಯಾಗಿ ಮಹಾತ್ಮ ಗಾಂಧೀಜಿ ಅವರ ಬದುಕು ಮತ್ತು ಜೀವನವನ್ನು ವಿದ್ಯಾರ್ಥಿಗಳಿಗೆ ಸದಾ ತಿಳಿಸುವುದಲ್ಲದೆ ತಾವು ಕೂಡ ಗಾಂಧಿ ವಾದಿಯಾಗಿ ತಮ್ಮ ಬದುಕು ಸಾಗಿಸಿದ್ದರು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಲವು ನಾಟಕ ಅಕಾಡೆಮಿ ಪ್ರಶಸ್ತಿ ಗಳಿಗೆ ಪುರಸ್ಕೃತರಾಗಿದ್ದರು.

ನಮ್ಮ ಜಿಲ್ಲೆಯ ಸಾಮಾಜಿಕ ಶೈಕ್ಷಣಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ನೆಲದ ಸಾಕ್ಷಿಪ್ರಜ್ಞೆಯಂತಿದ್ದರು.ಚಿದಂಬರರಾವ್ ಅವರ ಅಗಲಿಕೆಯಿಂದ ನಾಡಿನ ರಂಗಭೂಮಿ ಕ್ಷೇತ್ರ ಮಾತ್ರವಲ್ಲದೆ ಸಾಮಾಜಿಕ ಕ್ಷೇತ್ರ ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವರು ಸಂತಾಪ ಸೂಚಿಸಿದ್ದಾರೆ.

Author