ಶಿಕಾರಿಪುರ,ಪಟ್ಟಣದ ಹುಚ್ಚರಾಯಸ್ವಾಮಿ ಕೆರೆಯಲ್ಲಿ ಯುವತಿಯೊಬ್ಬಳ ಶವ ಪತ್ತೆಯಾಗಿರುವ ಘಟನೆ ಬುಧವಾರ ನಡೆದಿದೆ. ಮೃತ ಯುವತಿಯನ್ನು ರಮ್ಯ (21) ಎಂದು ಗುರುತಿಸಲಾಗಿದ್ದು, ಆಕೆ ಶಿಕಾರಿಪುರದಲ್ಲಿ ದ್ವಿತೀಯ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ.ಮಾಹಿತಿಯ ಪ್ರಕಾರ, ಯುವತಿ ಕಾಲೇಜಿಗೆ ತೆರಳುವ ಉಡುಪಿನಲ್ಲಿದ್ದಾಗಲೇ ಕೆರೆಯಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಮಧ್ಯಾಹ್ನ ಸುಮಾರು 12.45ರಿಂದ 1.45ರ ಅವಧಿಯಲ್ಲಿ ಕೆರೆಯಲ್ಲಿ ಶವ ಪತ್ತೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಆದರೆ ಯುವತಿ ನಿಖರವಾಗಿ ಯಾವ ಸಮಯದಲ್ಲಿ ನೀರಿಗೆ ಬಿದ್ದಳು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರಮ್ಯ ಶಿಕಾರಿಪುರದ ಪ್ರತಿಷ್ಠಿತ ಬಾರ್ ಮಾಲೀಕರ ಮಗಳು ಎಂಬುದಾಗಿ ತಿಳಿದು ಬಂದಿದೆ.
ಮೃತ ಯುವತಿಯ ಕುರಿತು ಲಭ್ಯವಾಗಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಇತ್ತೀಚೆಗೆ ಆಕೆಯ ಪರೀಕ್ಷಾ ಫಲಿತಾಂಶ ಬಂದಿದ್ದು, ಒಂದು ಸೆಮಿಸ್ಟರ್‌ನಲ್ಲಿ ಅನುತ್ತೀರ್ಣಳಾಗಿದ್ದಳು ಎನ್ನಲಾಗಿದೆ. ಇದರಿಂದ ಆಕೆ ಬೇಸರಗೊಂಡಿದ್ದಿರಬಹುದು ಎಂಬ ಮಾತುಗಳು ಕೇಳಿಬಂದಿವೆ.ಆದರೆ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿರುವುದೇ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ.





