ಶಿವಮೊಗ್ಗ, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಕಾಡಾ) ಕೇಂದ್ರ ಕಚೇರಿಯಲ್ಲಿ ದಿನಾಂಕ 09 ಸೆಪ್ಟೆಂಬರ್ 2026ರಂದು ನೀರು ಬಳಕೆದಾರರ ಸಹಕಾರ ಸಂಘಗಳ ಆಡಳಿತಾಧಿಕಾರಿಗಳು, ಪದಾಧಿಕಾರಿಗಳು ಹಾಗೂ ಸದಸ್ಯರುಗಳಿಗಾಗಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಾಗಾರದಲ್ಲಿ ಸಹಕಾರ ಸಂಘಗಳ ಜಂಟಿ ನಿಬಂಧಕರು ಹಾಗೂ ಭೂ ಅಭಿವೃದ್ಧಿ ಅಧಿಕಾರಿ (ಸಹಕಾರ) ಡಾ. ನಾಗೇಶ್ ಎಸ್. ಡೋಂಗರೆ ಅವರು ನೀರು ಬಳಕೆದಾರ ಸಹಕಾರ ಸಂಘಗಳ ಆಡಳಿತಾಧಿಕಾರಿಗಳಿಗೆ ಅವರ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಸಮಗ್ರ ತರಬೇತಿ ನೀಡಿದರು.
ರೈತರು ಒಗ್ಗಟ್ಟಿನಿಂದ ಬೆಳೆ ಬೆಳೆಯಲು ಕಾಡಾ ಅಧ್ಯಕ್ಷರ ಕರೆ:
ನಂತರ ಕಾಡಾ ಅಧ್ಯಕ್ಷರಾದ ಕೆ.ಪಿ. ಅಂಶುಮಂತ್ ಅವರ ಅಧ್ಯಕ್ಷತೆಯಲ್ಲಿ ದಾವಣಗೆರೆ, ಚನ್ನಗಿರಿ ಹಾಗೂ ಹರಿಹರ ತಾಲೂಕುಗಳ ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರುಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಅಧ್ಯಕ್ಷರು, “ನೀರಾವರಿ ಕ್ಷೇತ್ರದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಜವಾಬ್ದಾರಿ ಹಿರಿದಾದುದು. ರೈತರು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವ ಜೊತೆಗೆ ನೀರನ್ನು ಮಿತವಾಗಿ ಬಳಸುವುದನ್ನು ರೂಢಿಸಿಕೊಳ್ಳಬೇಕು. ಸಹಕಾರ ಸಂಘಗಳನ್ನು ವಿವಿಧೋದ್ದೇಶ ಸಂಘಗಳನ್ನಾಗಿ ಪರಿವರ್ತಿಸಿ, ಅವುಗಳಿಂದ ದೊರೆಯುವ ಸೌಲಭ್ಯಗಳನ್ನು ಗರಿಷ್ಠ ಮಟ್ಟದಲ್ಲಿ ಪಡೆದುಕೊಳ್ಳಬೇಕು ಹಾಗೂ ರೈತರೆಲ್ಲರೂ ಒಗ್ಗಟ್ಟಿನಿಂದ ಬೆಳೆ ಬೆಳೆಯಬೇಕು” ಎಂದು ಕರೆ ನೀಡಿದರು.
ಕೃಷಿ ಯಂತ್ರೋಪಕರಣಗಳ ವಿತರಣೆ:ಕಾರ್ಯಕ್ರಮದ ಅಂಗವಾಗಿ ಅರ್ಹ ನೀರು ಬಳಕೆದಾರ ಸಹಕಾರ ಸಂಘಗಳಿಗೆ ಕಾಡಾ ಪ್ರಾಧಿಕಾರದ ವತಿಯಿಂದ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಕಾಡಾ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಇಂಜಿನಿಯರ್ ಆರ್. ಸತೀಶ್, ಭೂ ಅಭಿವೃದ್ಧಿ ಅಧಿಕಾರಿ (ತಾಂತ್ರಿಕ) ಪ್ರಶಾಂತ್ ಕೆ., ಉಪಆಡಳಿತಾಧಿಕಾರಿ (ಪ್ರ) ಶ್ರೀನಿವಾಸ್ ಚಿಂತಾಲ, ಭೂ ಅಭಿವೃದ್ಧಿ ಅಧಿಕಾರಿ (ಕೃಷಿ), ಭದ್ರಾ ಕಾಡಾ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ದಾವಣಗೆರೆ ವಿಭಾಗದ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.





