ಶಿವಮೊಗ್ಗ: ನಗರದ ಶ್ರಮಿಕ ವರ್ಗದ ಆರೋಗ್ಯ ಸುರಕ್ಷತೆ ಮತ್ತು ಅವರ ಹಕ್ಕುಗಳ ರಕ್ಷಣೆ ನಮ್ಮ ಪ್ರಮುಖ ಜವಾಬ್ದಾರಿಯಾಗಿದ್ದು, ಕಾರ್ಮಿಕರಿಗೆ ಸಮರ್ಪಕ ವೈದ್ಯಕೀಯ ಸೇವೆ ಹಾಗೂ ಜೀವ ರಕ್ಷಕ ಔಷಧಿಗಳನ್ನು ಒದಗಿಸುವುದರಲ್ಲಿ ಯಾವುದೇ ಲೋಪ ಎಸಗಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್. ಎನ್. ಚನ್ನಬಸಪ್ಪ (ಚೆನ್ನಿ) ಅವರು ಇಲಾಖಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಶಾಸಕರ ಅಧಿಕೃತ ಕಾರ್ಯಾಲಯವಾದ ‘ಕರ್ತವ್ಯ ಭವನ’ದಲ್ಲಿ ಇಎಸ್ಐಸಿ (ESIC) ಇಲಾಖೆಯ ಹಿರಿಯ ಅಧಿಕಾರಿಗಳು, ವೈದ್ಯರು ಹಾಗೂ ಕಾರ್ಮಿಕ ಮುಖಂಡರೊಂದಿಗೆ ಶಾಸಕರು ಮಹತ್ವದ ಸಮಾಲೋಚನಾ ಸಭೆ ನಡೆಸಿ ಕಾರ್ಮಿಕರ ಆರೋಗ್ಯ ಸಮಸ್ಯೆಗಳನ್ನು ಸವಿಸ್ತಾರವಾಗಿ ಪರಿಶೀಲಿಸಿದರು.
ಸಭೆಯಲ್ಲಿ ಶಾಸಕರು ಕೈಗೊಂಡ ಪ್ರಮುಖ ನಿರ್ಣಯಗಳು ಹಾಗೂ ಅಧಿಕಾರಿಗಳಿಗೆ ನೀಡಿದ ನಿರ್ದೇಶನಗಳು:
1. ಒಪಿಡಿ (OPD) ಸೇವೆ ತಕ್ಷಣ ಆರಂಭ: ಇಎಸ್ಐ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗ (OPD) ಕಾರ್ಯನಿರ್ವಹಿಸದೆ ಕಾರ್ಮಿಕರು ಚಿಕಿತ್ಸೆಗಾಗಿ ಪರದಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು, ಕೂಡಲೇ ಒಪಿಡಿ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಹಾಗೂ ಅಗತ್ಯವಿರುವ ಹೆಚ್ಚುವರಿ ಕೊಠಡಿ ಮತ್ತು ಸ್ಥಳಾವಕಾಶವನ್ನು ತಕ್ಷಣವೇ ಒದಗಿಸಲು ಸೂಚಿಸಿದರು.
2. ವೈದ್ಯರ ಕೊರತೆ ನೀಗಿಸಲು ಕ್ರಮ: ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರ ಹುದ್ದೆಗಳ ಕುರಿತು ಮಾಹಿತಿ ಪಡೆದ ಶಾಸಕರು, ಈ ಕೊರತೆಯನ್ನು ಶೀಘ್ರವಾಗಿ ಭರ್ತಿ ಮಾಡುವ ನಿಟ್ಟಿನಲ್ಲಿ ರಾಜ್ಯ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ತಕ್ಷಣವೇ ವೈದ್ಯರನ್ನು ನಿಯೋಜಿಸಲು ಒತ್ತಾಯಿಸಿದರು.
3. ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಕಠಿಣ ಕ್ರಮ:
ಇಎಸ್ಐಸಿ (ESIC) ಕಾರ್ಡ್ದಾರ ರೋಗಿಗಳಿಗೆ ನಗರದ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಬಂದ ದೂರುಗಳನ್ನು ಪರಿಗಣಿಸಿ, ಅಂತಹ ಆಸ್ಪತ್ರೆಗಳ ವಿರುದ್ಧ ತಕ್ಷಣವೇ ಪರಿಶೀಲನೆ ನಡೆಸಿ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
4. ಶಿಫಾರಸು (ರೆಫರಲ್) ಪತ್ರ ವಿಳಂಬಕ್ಕೆ ಬ್ರೇಕ್: ತುರ್ತು ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳಲು ಶಿಫಾರಸು ಪತ್ರ ನೀಡುವಲ್ಲಿ ಅಧಿಕಾರಿಗಳು ಕಾಲಹರಣ ಮಾಡದೆ, ರೋಗಿಗಳ ಹಿತದೃಷ್ಟಿಯಿಂದ ಸಮಯಕ್ಕೆ ಸರಿಯಾಗಿ ಪತ್ರ ವಿತರಿಸಲು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
5. ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ: ಪ್ರತಿಯೊಬ್ಬ ಕಾರ್ಡ್ದಾರ ಕಾರ್ಮಿಕ ಬಂಧುಗಳಿಗೂ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆಗಳು ಹಾಗೂ ಗುಣಮಟ್ಟದ ಔಷಧಿಗಳು ಯಾವುದೇ ಅಡೆತಡೆಯಿಲ್ಲದೆ ಲಭ್ಯವಾಗುವಂತೆ ಪೂರ್ಣ ಪ್ರಮಾಣದ ವ್ಯವಸ್ಥೆ ಕಲ್ಪಿಸಲು ನಿರ್ದೇಶನ ನೀಡಿದರು.
ಈ ಸಭೆಯಲ್ಲಿ ಇಎಸ್ಐಸಿ ಅಧಿಕಾರಿಗಳಾದ ಶ್ರೀ ಬಸವನಗೌಡ, ಕಾರ್ಮಿಕ ಮುಖಂಡರಾದ ರಾಜು ಸಾಬ್, ಜಿಲ್ಲಾ ಮತ್ತು ತಾಲೂಕು ಮಟ್ಟದ ಕಾರ್ಮಿಕ ಅಧಿಕಾರಿಗಳು, ಇಎಸ್ಐಸಿ ವೈದ್ಯಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.





