ಸಾಗರ | ನೆಲ್ಲಿಬೀಡು ಅಪಘಾತ: ಗಾಯಳು ನೀಲಕುಮಾರ್ ಸಾವು

ಅವಘಡ ದುರಂತ

ಸಾಗರ ತಾಲ್ಲೂಕು ತುಮರಿ ಸಮೀಪದ ನೆಲ್ಲಿಬೀಡಿನಲ್ಲಿ ಮರಳು ತುಂಬಿದ ಟಿಪ್ಪರ್ ಬೈಕ್‌ಗೆ ಡಿಕ್ಕಿ ಹೊಡೆದಿದ್ದ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಳೂರು ಗ್ರಾಮದ ನೀಲಕುಮಾರ್ ಜೈನ್ (45) ಮೊನ್ನೆ ದಿನ ಸೋಮವಾರ ಮೃತಪಟ್ಟಿದ್ದಾರೆ. ಇದೇ ಅಪಘಾತದಲ್ಲಿ ಅವರ ಪುತ್ರಿ ಅರ್ಚನಾ ಜೈನ್ ಸ್ಥಳದಲ್ಲೇ ಸಾವಿಗೀಡಾಗಿದ್ದರು.ಉಡುಪಿಯ ಖಾಸಗಿ ಹಾಸ್ಟೆಲ್‌ನಲ್ಲಿ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದ ಅರ್ಚನಾ ಜೈನ್ ರಜೆಗಾಗಿ ಊರಿಗೆ ಬಂದಿದ್ದರು.

ರಜೆ ಮುಗಿದ ಹಿನ್ನೆಲೆಯಲ್ಲಿ ಅರ್ಚನಾ ಉಡುಪಿಗೆ ಕೆಲಸಕ್ಕೆ ಮರಳಬೇಕಿತ್ತು. ಅವರನ್ನು ಬಿಡುವ ಉದ್ದೇಶದಿಂದ ತಂದೆ ನೀಲಕುಮಾರ್ ಜೈನ್ ಆಗಸ್ಟ್ 25ರ ಮಂಗಳವಾರ ಬೆಳಗ್ಗೆ ಮಗಳನ್ನ ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ತಂದೆ ಮತ್ತು ಮಗಳು ಬೈಕ್‌ನಲ್ಲಿ ಮಳೂರು ಗ್ರಾಮದಿಂದ ತೆರಳುತ್ತಿದ್ದಾಗ ನೆಲ್ಲಿಬೀಡು ಸಮೀಪ ಅಪಘಾತ ಸಂಭವಿಸಿತ್ತು.

ಸರ್ಕಲ್​ ಹತ್ತಿರ ಒಂದೇ ಸಮನೆ ಮೈಮೇಲೆ ಬಂದಂತೆ ಬಂದ ಮರಳು ಲಾರಿ ಸೀದಾ ಬೈಕ್​ಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯಾದ ರಭಸಕ್ಕೆ ಬೈಕ್‌ನ ಮುಂಭಾಗ ನುಜ್ಜುಗುಜ್ಜಾಗಿತ್ತುಷ್ಟೆ ಹಿಂಬದಿಯಲ್ಲಿ ಕುಳಿತಿದ್ದ ಅರ್ಚನಾ ತಲೆ ಕೆಳಗಾಗಿ ರಸ್ತೆಗೆ ಬಿದ್ದಿದ್ದರು. ಅಪಘಾತದಲ್ಲಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದರು. ತಂದೆ ನೀಲಕುಮಾರ್ ಜೈನ್ ಸೀರಿಯಸ್ ಆಗಿದ್ದರು. ಅವರನ್ನ ಮಣಿಪಾಲಕ್ಕೆ ಶಿಫ್ಟ್ ಮಾಡಲಾಗಿತ್ತು. ಆನಂತರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಚೇತರಿಕೆ ಕಂಡುಬರದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅರ್ಚನಾ ಜೈನ್ ಅವರನ್ನು ಕಳೆದುಕೊಂಡಿದ್ದ ಕುಟುಂಬವು ಇದೀಗ ನೀಲಕುಮಾರ್ ಜೈನ್ ಅವರನ್ನೂ ಕಳೆದುಕೊಂಡಿದೆ. ನೀಲಕುಮಾರ್ ಅವರಿಗೆ ಪತ್ನಿ ಮತ್ತು ಪುತ್ರ ಇದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author