ಶಿವಮೊಗ್ಗ | ಮುಂಗಾರು ಬೆಳೆ ವಿಮೆ : ಸಾಲ ಪಡೆದ ರೈತರ ನೋಂದಣಿ ದಿನಾಂಕ ಆ. 31ರವರೆಗೆ ವಿಸ್ತರಣೆ​

ಶಿವಮೊಗ್ಗ

ಶಿವಮೊಗ್ಗ, 2026-27ನೇ ಸಾಲಿನ ಮುಂಗಾರು ಹಂಗಾಮಿನ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ’ ಯೋಜನೆಯಡಿ ಬೆಳೆ ಸಾಲ ಪಡೆದ ರೈತರಿಗೆ ನೋಂದಣಿ ಅವಧಿಯನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ​

ಸರ್ಕಾರದಿಂದ ಆಯ್ಕೆಯಾದ ಅಗ್ರಿಕಲ್ಚರ್ ಇನ್‌ಶ್ಯೂರೆನ್ಸ್ ಕಂಪನಿ ಸಹಯೋಗದಲ್ಲಿ ಈ ಯೋಜನೆ ಜಾರಿಯಾಗುತ್ತಿದ್ದು, ಭತ್ತ (ನೀರಾವರಿ/ಮಳೆ ಆಶ್ರಿತ) ಹಾಗೂ ರಾಗಿ (ಮಳೆ ಆಶ್ರಿತ) ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಲು ಈ ಹಿಂದೆ ಆಗಸ್ಟ್ 14 ಕೊನೆಯ ದಿನವಾಗಿತ್ತು. ರೈತರ ಕೋರಿಕೆಯ ಮೇರೆಗೆ ಇದೀಗ ಕೇವಲ ಸಾಲ ಪಡೆದ ರೈತರಿಗೆ ಮಾತ್ರ ಅನ್ವಯವಾಗುವಂತೆ ದಿನಾಂಕವನ್ನು ಆ. 31ರವರೆಗೆ ವಿಸ್ತರಿಸಲಾಗಿದೆ.

ಬಿತ್ತನೆ ಅಥವಾ ನಾಟಿ ಮಾಡುವ ಮುನ್ನವೇ ರೈತರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ​ಬೆಳೆ ಸಾಲ ಪಡೆದ ರೈತರು ಈ ವಿಮಾ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸದಿದ್ದರೆ, ನೋಂದಣಿ ಕೊನೆಯ ದಿನಾಂಕಕ್ಕೆ 7 ದಿನ ಮುಂಚಿತವಾಗಿ ಲಿಖಿತ ಮುಚ್ಚಳಿಕೆ ಪತ್ರ ಸಲ್ಲಿಸಿ ಯೋಜನೆಯಿಂದ ಹೊರಗುಳಿಯಬಹುದು.

ಸಾಲ ಪಡೆಯದ ರೈತರು ಪಹಣಿ ಮತ್ತು ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಸಮೀಪದ ಬ್ಯಾಂಕ್, ಹಣಕಾಸು ಸಂಸ್ಥೆ ಅಥವಾ ಸಿಎಸ್‌ಸಿ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕೃಷಿ, ಕಂದಾಯ, ಸಹಕಾರ ಇಲಾಖೆ, ಬ್ಯಾಂಕ್‌ಗಳು ಅಥವಾ ಸರ್ಕಾರದ ಸಂರಕ್ಷಣೆ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಕೋರಲಾಗಿದೆ.

Author