ಶಿವಮೊಗ್ಗ, ಮಲೆನಾಡು ಭಾಗದಲ್ಲಿ ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆ ಅಲ್ಲೋಲ ಕಲ್ಲೋಲವನ್ನುಂಟುಮಾಡಿದೆ. ಕೇಂದ್ರ ಸರ್ಕಾರ ೭ನೇ ಬಾರಿಗೆ ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಇದಕ್ಕೆ ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ಆಕ್ಷೇಪಣೆಯನ್ನೂ ಆಹ್ವಾನಿಸಿದೆ. ಇದೊಂದು ಅವೈಜ್ಞಾನಿಕ ಹಾಗೂ ಅಪ್ರಸ್ತುತ ವರದಿ ಆಗಿರುವ ಹಿನ್ನೆಲೆಯಲ್ಲಿ ವಿರೋಧ ಮಾಡಬೇಕಾಗಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.
ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧಿಸಿ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಬೇಕು. ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಶೋಭಾ ಕರಂದ್ಲಾಜೆ, ಪ್ರಹ್ಲಾದ ಜೋಷಿ ಅವರ ಜೊತೆ ಗೂಡಿ ಕೇಂದ್ರ ಅರಣ್ಯ ಮತ್ತು ಪರಿ ಸರ ಖಾತೆ ಸಚಿವರಾಗಿದ್ದ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು. ರಾಜ್ಯ ಸರ್ಕಾರದ ಕಡೆಯಿಂದಲೂ ವರದಿ ಜಾರಿ ಮಾಡದಂತೆ ಆಕ್ಷೇಪಣೆ ಸಲ್ಲಿಸಲಾಗಿತ್ತು. ಭೂಪೇಂದ್ರ ಯಾದವ್ ಅವರು ಇಲ್ಲಿನ ಸ್ಥಿತಿಗತಿ ಅಧ್ಯಯನ ಮಾಡಲು ಸಮಿತಿ ಒಂದನ್ನು ಕಳಿಸಿ ವರದಿ ಪಡೆಯುವ ಭರವಸೆಯನ್ನೂ ನೀಡಿದ್ದರು. ಅಲ್ಲಿಂದೀಚೆಗೆ ಕಸ್ತೂರಿ ರಂಗನ್ ವರದಿ ಬಗ್ಗೆ ಪ್ರಸ್ತಾಪ ಆಗಿರಲಿಲ್ಲ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿಯೇ ೪೪೭ ಗ್ರಾಮಗಳನ್ನು ವರದಿ ಅಡಿಯಲ್ಲಿ ಗುರುತಿಸಲಾಗಿದೆ. ಇದು ಜಾರಿಗೆ ಬಂದರೆ ದೊಡ್ಡ ಅನಾಹುತವೇ ಆಗುತ್ತದೆ. ರೈತರಿಗೆ ತೊಂದರೆ ಆಗುತ್ತದೆ. ಕೃಷಿ ಚಟುವ ಟಿಕೆ ಮಾಡಲು ಆಗುವುದಿಲ್ಲ. ಇದು ಇನ್ನೊಂದು ಮುಳುಗಡೆ ಆಗಲಿದೆ. ಹಾಗಾಗಿಯೇ ಇದನ್ನು ವಾಪಾಸ್ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ ಅವರು, ರಾಜ್ಯ ಸರ್ಕಾರ ಇದನ್ನು ಆಕ್ಷೇಪಿಸಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರವನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಬೇಕು.
ಕೇರಳ ಸರ್ಕಾರದ ಮಾದರಿಯನ್ನು ಇಲ್ಲಿ ಅನುಸರಿಸಬೇಕು. ಆಡಳಿತ ಪಕ್ಷ, ವಿರೋಧ ಪಕ್ಷ ಎಂಬ ತಾರತಮ್ಯ ಇಲ್ಲದೆ ಎಲ್ಲರೂ ಇದನ್ನು ವಿರೋಧ ಮಾಡಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಕೆ.ಜಗದೀಶ್, ಮಾಲತೇಶ್, ಚಂದ್ರಶೇಖರ್ ಎಸ್., ಮಂಜುನಾಥ್ ಎನ್. ಹಾಜರಿದ್ದರು.





