ಶಿವಮೊಗ್ಗ,ನಮ್ಮ ಪೂರ್ವಜರು ಗುಲಾಮ ಗಿರಿಯಲ್ಲಿ ಬದುಕಿದ್ದು ನಂತರ ನಮ್ಮ ಹಿರಿಯರು ಹೋರಾಟದಿಂದಾಗಿ ಬ್ರಿಟೀಷ ಆಡಳಿತದಿಂದ ಮುಕ್ತರಾಗಿ ಸ್ವತಂತ್ರರಾದೆವು. ಸ್ವತಂತ್ರರಾಗಿ ೮೦ವರ್ಷಗಳಾದ ಈ ದಿನವನ್ನು ನಮ್ಮ ಹಿರಿಯರ ತ್ಯಾಗ ಬಲಿದಾನಗಳಿಂದ ಪಡೆದ ಸ್ವಾತಂತ್ರವನ್ನು ನಾವು ಅನುಭವಿಸಿಕೊಂಡು ಬರುತ್ತಿದ್ದೇವೆ. ಇವೆಲ್ಲವುಗಳನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹಿರಿಯ ನಟ ರಮೇಶ್ ಭಟ್ ಹೇಳಿದರು. ಅವರು ಶನಿವಾರ ಸಾಗರದ ಲಾಲ್ ಬಹಾದರೂ ಶಾಸ್ತ್ರಿ ಕಾಲೇಜಿನಲ್ಲಿ ಸ್ವಾತಂತ್ರ್ತೋತ್ಸವ ಸಮಾರಂಭದಲ್ಲಿ ಮಾತನಡಿದರು.
ನಮ್ಮ ದೇಶ ಕಂಡ ಅಪ್ರತಿಮ ಪ್ರಧಾನಿ ಲಾಲ್ಬಹಾದ್ದೂರ್ ಶಾಸ್ತ್ರಿಯವರು ಈ ಕಾಲೇಜಿಗೆ ಅಡಿಗಲ್ಲನ್ನಿಟ್ಟಿರುವುದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುವಂತಹದ್ದಾಗಿದೆ. ನಾನೊಬ್ಬ ಸಾಮಾನ್ಯ ಕಲಾವಿದನಾಗಿದ್ದು, ನನ್ನ ಬದುಕು ರಂಗಭೂಮಿ ಮತ್ತು ಚಲನಚಿತ್ರದ ಮೂಲಕ ಕಟ್ಟಿಕೊಂಡಿದ್ದು. ನಾನು ಹೆಚ್ಚು ಓದಿದವನಲ್ಲದಿದ್ದರೂ ಕಾಲೇಜಿನ ಛದ್ಮವೇಷಗಳಲ್ಲಿ ದೇಶದ ಮಹಾನಾಯಕ ನೆಹರೂ, ಸಮಾಜದ ಗಣ್ಯರಾದ ಡಾಕ್ಟರ್, ಜಡ್ಜ್ ಮುಂತಾದ ಪಾತ್ರಗಳನ್ನು ಮಾಡಿ ಸೈ ಎನ್ನಿಸಿಕೊಂಡವನು. ನೀವೂ ಸಹ ಓದಿನ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕಾಲೇಜಿನ ಹೆಸರಿನ ಜೊತೆ ನಿಮ್ಮ ಹೆಸರನ್ನು ಪ್ರಪಂಚದಲ್ಲಿ ಮೂಡಿಸುವಂತಾಗಬೇಕು. ವಿದ್ಯಾರ್ಥಿ ಜೀವನ ಜೀವನದ ಅತ್ಯಂತ ಪ್ರಮುಖ ಹಂತ. ಇಲ್ಲಿಯೇ ನಿಮ್ಮ ಸರ್ವಾಂಗೀಣ ಪ್ರಗತಿಯನ್ನು ಕಂಡುಕೊಳ್ಳಬೇಕು. ಈ ದಿನದ ಹೆಜ್ಜೆ ನಿಮ್ಮ ಬದುಕಿನ ಕೊನೆಯವರೆಗೂ ನಡೆಯುವ ದಾರಿಯನ್ನು ತೋರಿಸುತ್ತದೆ ಎಂದರು.
ನಾನು ಕಳೆದ ೫೨ ವರ್ಷಗಳಲ್ಲಿ ೭೦೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದೇನೆ ಎಂಬುದು ಹೆಗ್ಗಳಿಕೆಯಾಗಿದೆ. ಇವುಗಳಲ್ಲಿ ನೋಡಿ ಸ್ವಾಮೀ ನಾವಿರೋದೇ ಹೀಗೆ ಸಿನಿಮಾದಂತಹ ಯುವಜನರ ಕಣ್ತೆರೆಸಿದ ಸಿನೇಮಾಗಳೂ ಇವೆ. ಜೀವನದಲ್ಲಿ ಉತ್ತಮ ತಿರುವು ನೀಡಿದ ಗೆಳೆಯರನ್ನು, ಹಿತೈಷಿಗಳನ್ನು, ಸಂಸ್ಥೆಗಳನ್ನು ಸದಾ ನೆನಪಿಸಿಕೊಂಡು ಅವರ ಋಣ ತೀರಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು.
ಕಾಲೇಜಿನ ಎನ್ಸಿಸಿ ಘಟಕವು ಕವಾಯ್ತು ಮೂಲಕ ಧ್ವಜ ವಂದನೆ ಸಲ್ಲಿಸಿತು. ಅತಿಥಿಗಳಿಗೆ ಕಾಲೇಜು ಆಡಳಿತಮಂಡಳಿಯು ಹಾರ ಹಾಕಿ ಶಾಲು ಹೊದೆಸಿ ಗೌರವಿಸಿತು. ಎಂಡಿಎಫ್ ಅಧ್ಯಕ್ಷ ಬಿ.ಆರ್. ಜಯಂತ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕ ನಿರ್ಮಾಪಕ ಧನಂಜಯ ಗಾರ್ಗಿ, ವಿವೇಕಾನಂದ ಸ್ವಾಯತ್ತ ಕಾಲೇಜಿನ ನಿಕಟಪೂರ್ವ ಕುಲಪತಿ ಶ್ರೀಧರ್ ಮುಂಡಿಗೆಹಳ್ಳ, ಬಿಎಡ್ ಕಾಲೇಜು ಪ್ರಾಂಶುಪಾಲೆ ಡಾ. ಶಿಲ್ಪಾ, ಸಹಕಾರ್ಯದರ್ಶಿ ಸತ್ಯನಾರಾಯಣ ಭಾಗವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಡಾ. ಲಕ್ಷ್ಮೀಶ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು, ಖಜಾಂಚಿ ಕವಲಕೋಡು ಕೆ. ವೆಂಕಟೇಶ್ ವಂದಿಸಿದರು.





