ಶಿವಮೊಗ್ಗ ನಗರದಲ್ಲಿ ಹಾಸು ಹೊದ್ದಷ್ಟು ಸಮಸ್ಯೆಗಳಿವೆ ಹಾಗೆ ಅವುಗಳನ್ನು ಆಗಾಗ ಕಾಲಕಾಲಕ್ಕೆ ಬಂದಂತ ಅಧಿಕಾರಿಗಳು ಪರಿಹರಿಸುತ್ತಾ ಜನಮಾನಸದಲ್ಲಿ ಉಳಿದಿದ್ದಾರೆ. ಅಧಿಕಾರಿಗಳು ಮಾಡುವ ಜನ ಉಪಯೋಗಿ ಕೆಲಸಗಳು ಸಾರ್ವಜನಿಕರ ಪ್ರಶಂಸೆಗೂ ಪಾತ್ರವಾಗಿದೆ.
ಯಾಕಪ್ಪ ಈ ಪೀಠಿಕೆ ಅಂತೀರಾ?
ಪಾಲಿಕೆ ಆಯುಕ್ತರು ತಮ್ಮ ಇಚ್ಚ ಶಕ್ತಿ ಪ್ರದರ್ಶನ ಮಾಡಿದರೆ ಖಂಡಿತ ಚಿಟಿಕೆ ಹೊಡೆಯುವಷ್ಟರಲ್ಲಿ ಸಮಸ್ಯೆಗೆ ಪರಿಹಾರ ಸಿಗಬೇಕಾದ ವಿಷಯವೊಂದಕ್ಕೆ ಕಗ್ಗಂಟು ಬಿಡಿಸಿದಂತೆ ಮಾಡುತ್ತಿದ್ದಾರೆ ಎಂಬುವುದೇ ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

ಹೌದು ,ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಡಿಯಲ್ಲಿರುವ ಕಮಲ ನೆಹರು ಹಾಗೂ ಕಸ್ತೂರಿ ಬಾ ಕಾಲೇಜುಗಳ ಮಧ್ಯೆ ಹಾದು ಹೋಗಿರುವ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಎಂಬುವುದು ಇವತ್ತು ಆಗುತ್ತೆ ನಾಳೆ ಆಗುತ್ತೆ ನಾಡಿದ್ದು ಆಗುತ್ತೆ ಎಂದು ಕಾಯುತ್ತಾ ವರ್ಷವೇ ಆಗುತ್ತಿದೆ.
ಏನಿದು ಸಮಸ್ಯೆ ಎಂಬುದರ ಬಗ್ಗೆ ಈ ವರೆಗೂ ನಡೆದಿರುವ ಮಾಹಿತಿ ನಿಮ್ಮ ಮುಂದೆ……
ಶಿವಮೊಗ್ಗದ ನೆಹರು ರಸ್ತೆ ವರ್ತಕರು ನೆಹರು ರಸ್ತೆಯಲ್ಲಿ ಪಾರ್ಕಿಂಗ್ ಅವ್ಯವಸ್ಥೆಯ ಹಿನ್ನೆಲೆ NES ಸಂಸ್ಥೆಯ ಕಾಲೇಜುಗಳ ಮಧ್ಯೆ ಹಾದುಹೋಗುವ ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಈ ಮೂಲಕ ಅದನ್ನು ಪಾದಚಾರಿ ಮಾರ್ಗವಾಗಿ ಬಳಸಲು ಅನುಕೂಲ ಮಾಡಿಕೊಡಬೇಕೆಂದು ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಅರ್ಜಿ ನೀಡಿದ್ದರು.
ಆದರೂ ಸಹ ಒತ್ತುವರಿ ತೆರವು ಆಗಿರಲಿಲ್ಲ ಆದರೆ ತದನಂತರ ದಿನಗಳಲ್ಲಿ ಈ ಸಮಸ್ಯೆಯ ಕುರಿತು ಮಾಧ್ಯಮದ ವರದಿ ಆಧರಿಸಿ ಮಾನ್ಯ ಲೋಕಾಯುಕ್ತ ಅಧಿಕಾರಿಗಳು ಸುಮೋಟೊ ಪ್ರಕರಣ ದಾಖಲು ಮಾಡಿಕೊಂಡ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದರು.

ಯಾವಾಗ ನೋಟಿಸ್ ಬಂತು ತಕ್ಷಣವೇ ಎಚ್ಚೆತ್ತು ಪಾಲಿಕೆಯ ಆಯುಕ್ತರು ಅಧಿಕಾರಿಗಳನ್ನು ಕಳಿಸಿ ಪರಿಶೀಲನೆ ನಡೆಸಿ ಒತ್ತುವರಿ ತೆರವುಗೊಳಿಸುವಂತೆ ರಾಷ್ಟ್ರೀಯ ಶಿಕ್ಷಣ ಸಮಿತಿಗೆ ನೋಟಿಸ್ ನೀಡಿದ್ದರು. ಅಲ್ಲಿಗೆ ಒಂದು ಹಂತದ ಕ್ರಮ ಆಯಿತೆಂದು ಲೋಕಾಯುಕ್ತರಿಗೆ ಮಾಹಿತಿ ನೀಡಿ ಮತ್ತೆ ಈ ವಿಷಯದ ಬಗ್ಗೆ ತಲೆಯನ್ನೇ ಹಾಕಲಿಲ್ಲ ಅದಾದ ನಂತರ ಮತ್ತೆ ಏನು ಕ್ರಮ ಆಗದಿದ್ದಾಗ ಮತ್ತೊಮ್ಮೆ ನೆಹರು ರಸ್ತೆ ವರ್ತಕರು ಮಹಾನಗರ ಪಾಲಿಕೆಯ ಆಯುಕ್ತರನ್ನ ಭೇಟಿ ಮಾಡಿ ವಿಳಂಬವಾಗುತ್ತಿರುವ ಬಗ್ಗೆ ಚರ್ಚೆ ನಡೆಸಿದ ನಂತರ ಮತ್ತೊಮ್ಮೆ ಎರಡನೇ ನೋಟಿಸ್ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅವರಿಗೆ ಮಹಾನಗರ ಪಾಲಿಕೆಯ ಅಧಿಕಾರಿಗಳು ನೀಡಿದ್ದರು.
ಇದೀಗ ಎರಡೆರಡು ನೋಟಿಸ್ ಗಳು ಕೊಡುವುದಕ್ಕೆ 3-4 ತಿಂಗಳು ತೆಗೆದುಕೊಂಡ ಪಾಲಿಕೆ ಆಡಳಿತ ಮೂರನೇ ಹಾಗೂ ಅಂತಿಮ ನೋಟಿಸ್ ನೀಡುವುದು ಯಾವಾಗ ಎಂಬ ಪ್ರಶ್ನೆ ಉದ್ಭವವಾಗಿದೆ..? ಅಷ್ಟೇ ಅಲ್ಲದೆ ಚಿಟಿಕೆ ಹೊಡೆಯುವಷ್ಟರಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರೇ ಯಾಕಿಷ್ಟು ಮೀನಾ ಮೇಷ ? ಕಾನೂನು ಬಾಹಿರ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ತಡವೇಕೆ? ಎಂಬ ಪ್ರಶ್ನೆ ಶಿವಮೊಗ್ಗದ ಪ್ರಜ್ಞಾವಂತ ನಾಗರಿಕರದ್ದಾಗಿದೆ !
ಇನ್ನು ಮುಖ್ಯ ವಿಚಾರ ಕೇಳಿಬರುತ್ತಿರುವುದೇನೆಂದರೆ ಮಾನ್ಯ ಆಯುಕ್ತರು ವಯೋ ನಿವೃತ್ತಿ ಅಂಚಿನಲ್ಲಿ ಇದ್ದಾರೆ ಎನ್ನಲಾಗುತ್ತಿದೆ
ಮಾನ್ಯ ಆಯುಕ್ತರೆ ನಗರದ ಈದ್ಗಾ ಮೈದಾನದಂತಹ ಹಲವಾರು ಸಮಸ್ಯೆಗಳ ಬಗೆಹರಿಸುವುದು ಸುಲಭದ ಮಾತಲ್ಲ ಎಂಬುದು ನಮ್ಮ ಆವಗಾಹನೆಗೆ ತಿಳಿದಿದೆ.
ಆದರೆ ರಾಜಕಾಲುವೆಯು ಅಥವಾ ನಗರದ ಬೃಹತ್ ಚರಂಡಿಯೋ ಏನು ನಿಮ್ಮ ಭಾವಕ್ಕೆ ಬಿಟ್ಟದ್ದು ಇಂತಹ ದೂರುಗಳಲ್ಲಿ ಕಾನೂನಾತ್ಮಕ ಬಲ ಇರುವಾಗ ಸರಿ ಪಡಿಸಬೇಕಲ್ಲವೆ? ದಶಕದ ಸಮಸ್ಯೆ ಇದು ಅಂತ ಸುಮ್ಮನೆ ಆದರೆ ಬಗೆಹರಿಯುವುದೇ?
ನ್ಯಾಯಾಲಯದಲ್ಲಿ ಮಾನ್ಯ ನ್ಯಾಯಾಧೀಶರು ಇದು ಹಲವಾರು ವರ್ಷಗಳ ಹಿಂದಿನ ಪ್ರಕರಣವೆಂದು ಅಂದು ನಾನು ಇರಲಿಲ್ಲ ಅಂತ ಇರುತ್ತಾರಾ? ಅಥವಾ ಪ್ರಕರಣ ಇತ್ಯರ್ಥ ಮಾಡಿ ತೀರ್ಪು ನೀಡುತ್ತಾರಾ?

ಹಾಗೆಯೇ ಇಂದು ತಾವುಗಳು ಅಧಿಕಾರಿಯಾಗಿದ್ದೀರಿ ತಮ್ಮಿಂದ ಒಳ್ಳೆಯ ಕಾರ್ಯ ಮಾಡಲು ಈಗ ಸದವಕಾಶವಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಎಂತೆಂಥ ಅಧಿಕಾರಿಗಳು ಬಂದು ಹೋಗಿದ್ದಾರೆ.
ಇದೇ ಜಾಮ್ ದಾರ್ ಅವರು ಜಿಲ್ಲಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಕುವೆಂಪು ರಂಗ ಮಂದಿರ ನಿರ್ಮಾಣಕ್ಕಾಗಿ ರಾಜಕುಮಾರ್ ನೈಟ್ಸ್ ಕಾರ್ಯಕ್ರಮ ಮಾಡುವ ಮೂಲಕ ಕುವೆಂಪು ರಂಗ ಆಯಿತು. ಜಾಮ್ ದಾರ್ ಅವರು ನಿವೃತ್ತರಾಗಿ ವರ್ಷಗಳೇ ಕಳೆದವು ಆದರೆ ಇಂದಿಗೂ ಸಹ ಜಾಮ್ ದಾರ್ ನೆನಪು ಚಿರಸ್ಥಾಯಿಯಾಗಿ ಜನಮಾನಸದಲ್ಲಿ ಉಳಿದಿದೆ.
ಅಂತೆಯೇ ಪೊನ್ನುರಾಜ್ ಅವರು ರಾಜ ಕಾಲುವೆ ಒತ್ತುವರಿ ತೆರವುಗೊಳಿಸುವ ಕುರಿತು ಸಾಕಷ್ಟು ಕೆಲಸ ಮಾಡಿದ್ದು ಹಸಿರಾಗಿದೆ. ಇನ್ನು ಅನೇಕ ಈ ರೀತಿಯ ಜಿಲ್ಲಾಧಿಕಾರಿ ಆಗಿದ್ದ ಪಂಕಜ್ ಕುಮಾರ್ ಪಾಂಡೆ ಮಾರ್ಕೆಟ್ ಬಿಲ್ಡಿಂಗ್ ತೆರವು ಕಾರ್ಯಾಚರಣೆ ನಡೆಸಿದ್ದು ಕೂಡ ಅಚ್ಚಳಿಯದೆ ಉಳಿದಿದೆ. ಅವರು ಇರಬಹುದು ಇನ್ನು ಹಲವರು ಇದ್ದಾರೆ.

ಆದರೆ ತಾವುಗಳ ಯಾಕೆ ಇನ್ನೂ ಒಂದು ಒಳ್ಳೆಯ ಕೆಲಸ ಮಾಡಲು ಮೀನ ಮೇಷ ಎಣಿಸುತ್ತಿದ್ದೀರಾ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ? ಶಿವಮೊಗ್ಗ ಜನತೆಯ ಮನದಲ್ಲಿ ತಾವುಗಳು ಚಿರಸ್ಥಾಯಿಯಾಗುವ ಅವಕಾಶವಿದ್ದರು ಯಾಕೆ ಬಳಸಿಕೊಳ್ಳುತ್ತಿಲ್ಲ? ಇನ್ನಾದರೂ ತಾವುಗಳು ಅನಧಿಕೃತ ಕಾನೂನುಬಾಹಿರ ರಾಜಕಾಲುವೆ ಒತ್ತುವರಿ ತೆರುವುಗೊಳಿಸುತ್ತೀರಾ? ಎಂಬ ನಂಬಿಕೆ ಶಿವಮೊಗ್ಗದ ನಾಗರಿಕರು ಇಟ್ಟು ಕೊಳ್ಳಬಹುದೇ…??
