ಮಗು ಕಾಣೆಯಾದ ಕೂಡಲೇ ವಿಳಂಬ ಮಾಡದೆ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ತಕ್ಷಣ ಎಫ್‌ಐಆರ್ ದಾಖಲಿಸಬೇಕು : ಎಸ್‌ಪಿ ನಿಖಿಲ್. ಬಿ

ಶಿವಮೊಗ್ಗ

ಶಿವಮೊಗ್ಗ, ಮಗು ಕಾಣೆಯಾದ ಕೂಡಲೇ ಯಾವುದೇ ವಿಳಂಬ ಮಾಡದೆ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ತಕ್ಷಣ ಎಫ್‌ಐಆರ್ ದಾಖಲಿಸಬೇಕು. ಆರಂಭಿಕ ಹಂತದಲ್ಲೇ ತನಿಖೆ ಕೈಗೊಂಡರೆ ಮಕ್ಕಳನ್ನು ಸುರಕ್ಷಿತವಾಗಿ ಪತ್ತೆಹಚ್ಚುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತ ಆಶ್ರಯದಲ್ಲಿ ನಗರದ ಡಿಎಆರ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಾಣೆಯಾದ ಮಕ್ಕಳ ಪತ್ತೆ ವಿಶೇಷ ಕಾರ್ಯಪಡೆ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಮಗು ಕಾಣೆಯಾದ ತಕ್ಷಣವೇ ಪ್ರಕರಣ ದಾಖಲಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಬೇಕು. ಕಾಣೆಯಾದ ಮಗುವಿನ ಭಾವಚಿತ್ರ ಹಾಗೂ ವಿವರಗಳನ್ನು ರಾಜ್ಯ ಮತ್ತು ದೇಶದ ಎಲ್ಲಾ ಪೊಲೀಸ್ ಠಾಣೆಗಳಿಗೆ ತಕ್ಷಣವೇ ರವಾನಿಸಬೇಕು.

ಮೊದಲ 24 ಗಂಟೆಗಳು ಅತ್ಯಂತ ಮಹತ್ವದ್ದಾಗಿರುವುದರಿಂದ ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ವಹಿಸದೆ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಸಿಬ್ಬಂದಿಗೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವ ಜವಾಬ್ದಾರಿ ನೀಡಲಾಗಿದೆ. ಶಾಲೆಗೆ ದಾಖಲಾದ ಎರಡು ತಿಂಗಳ ನಂತರವೂ ಮಕ್ಕಳು ನಿಯಮಿತವಾಗಿ ಶಾಲೆಗೆ ಹಾಜರಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಎಸ್‌ಪಿ ತಿಳಿಸಿದರು.

111 ಮಕ್ಕಳಲ್ಲಿ 100 ಮಕ್ಕಳು ಪತ್ತೆ2026ರ ಜನವರಿಯಿಂದ ಜೂನ್‌ವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 111 ಮಕ್ಕಳು ಕಾಣೆಯಾಗಿದ್ದು, ಅವರಲ್ಲಿ 100 ಮಕ್ಕಳನ್ನು (ಶೇ.90ಕ್ಕೂ ಹೆಚ್ಚು) ಯಶಸ್ವಿಯಾಗಿ ಪತ್ತೆಹಚ್ಚಲಾಗಿದೆ. ಈ ಸಂಬಂಧ 98 ಎಫ್‌ಐಆರ್‌ಗಳು ದಾಖಲಾಗಿವೆ. ಇನ್ನೂ 11 ಮಕ್ಕಳು ಪತ್ತೆಯಾಗಬೇಕಿದ್ದು, ಶೋಧ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಸಭೆಯಲ್ಲಿ ನೀಡಲಾದ ಮಾಹಿತಿಯಂತೆ:

ಬಾಲ್ಯವಿವಾಹ ಪ್ರಕರಣಗಳಿಂದ ರಕ್ಷಿಸಲ್ಪಟ್ಟ ಮಕ್ಕಳು – 34ಮನುಷ್ಯ ಕಳ್ಳಸಾಗಣೆಯಿಂದ ರಕ್ಷಿಸಲ್ಪಟ್ಟ ಮಕ್ಕಳು – 19ಚಾರ್ಜ್‌ಶೀಟ್ ಸಲ್ಲಿಸಲಾದ ಪ್ರಕರಣಗಳು – 24ಜೆಜೆ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ನೋಟಿಸ್‌ಗಳನ್ನು ನಿಗದಿತ ಸಮಯಕ್ಕೆ ನೀಡುವಂತೆ ಎಸ್‌ಪಿ ಸೂಚಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ್ ಎಂ.ಎಸ್. ಮಾತನಾಡಿ, ಕಾಣೆಯಾದ ಮಕ್ಕಳ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪ್ರಾಥಮಿಕ ವಿಚಾರಣೆ ಅಗತ್ಯವಿಲ್ಲ. ದೂರು ಬಂದ ಕೂಡಲೇ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದರು.

ಕೌಟುಂಬಿಕ ಹಾಗೂ ಸಣ್ಣಪುಟ್ಟ ವಿವಾದಗಳನ್ನು ನ್ಯಾಯಾಲಯಕ್ಕೆ ಹೋಗದೆ ಕಮ್ಯುನಿಟಿ ಮೀಡಿಯೇಷನ್ ಮೂಲಕ ಪರಸ್ಪರ ಮಾತುಕತೆಯಿಂದ ಬಗೆಹರಿಸಿಕೊಳ್ಳುವ ವ್ಯವಸ್ಥೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಡಿಡಿಪಿಐ ಮಂಜುನಾಥ್ ಎಸ್.ಆರ್., ಡಿವೈಎಸ್‌ಪಿ ಸಂಜೀವ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶಶಿರೇಖಾ ಸ್ವಾಗತಿಸಿದರು.

Author