ಕಳೆದ ವರ್ಷ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಸೋದರಿ ಸಂಗೀತಾ ಅವರ ಪ್ರಕರಣವು, ಒಂದು ವರ್ಷದ ಬಳಿಕ ಮಿಸ್ಸಿಂಗ್ ಪ್ರಕರಣ ದಾಖಲಾಗುತ್ತಿದ್ದಂತೆ ತಡವಾಗಿ ಬೆಳಕಿಗೆ ಬಂದಿರುವುದು ಅತ್ಯಂತ ದುಃಖಕರ, ಅಮಾನವೀಯ ಹಾಗೂ ತೀವ್ರವಾಗಿ ಖಂಡನೀಯ ಸಂಗತಿಯಾಗಿದೆ.
ಇಂದು ಸಂಗೀತಾ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ದುಃಖತಪ್ತ ತಂದೆ ಹಾಗೂ ಕುಟುಂಬದ ಸಮಸ್ತ ಸದಸ್ಯರಿಗೆ ಸಾಂತ್ವನ ಹೇಳಿ, ಈ ಕಠಿಣ ಸಮಯದಲ್ಲಿ ಸಂಸದರು ಧೈರ್ಯ ತುಂಬಿದರು.

ಮಗಳ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿರುವ ಆ ನಿರಪರಾಧಿ ಕುಟುಂಬದ ಆಕ್ರಂದನ ಮನ ಕಲಕುವಂತಿದೆ.ಈ ಸೂಕ್ಷ್ಮ ಹಾಗೂ ಗಂಭೀರ ಪ್ರಕರಣದ ಸತ್ಯಾಸತ್ಯತೆ ಸಂಪೂರ್ಣವಾಗಿ ಹೊರಬರಬೇಕಾದರೆ ಮತ್ತು ಈ ವಿಳಂಬಕ್ಕೆ ಕಾರಣವಾದ ಅಂಶಗಳು ಬಯಲಾಗಬೇಕಾದರೆ, ತಕ್ಷಣವೇ ವಿಶೇಷ ತನಿಖಾ ತಂಡ (SIT) ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಈ ಮೂಲಕ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಕಟ್ಟುನಿಟ್ಟಾಗಿ ಒತ್ತಾಯಿಸಿದರು.

ಪ್ರಕರಣದ ಆರೋಪಿಗಳು ಈಗಾಗಲೇ ಬಂಧನಕ್ಕೊಳಗಾಗಿದ್ದು, ಯಾವುದೇ ಕಾರಣಕ್ಕೂ ರಾಜಕೀಯ ಪ್ರಭಾವಕ್ಕೆ ಮಣಿಯದೆ ತಪ್ಪಿತಸ್ಥರಿಗೆ ಕಾನೂನಿನ ಚೌಕಟ್ಟಿನಲ್ಲಿ ಕಠಿಣಾತಿಕಠಿಣ ಶಿಕ್ಷೆಯಾಗಬೇಕು. ಈ ಶೋಷಿತ ಕುಟುಂಬಕ್ಕೆ ಶೀಘ್ರವಾಗಿ ಸೂಕ್ತ ನ್ಯಾಯ ಮತ್ತು ಭದ್ರತೆ ದೊರೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಕೆ.ಎಸ್. ಗುರುಮೂರ್ತಿ ಅವರು, ತಾಲೂಕಿನ ಬಿಜೆಪಿ ಅಧ್ಯಕ್ಷರಾದ ಹನುಮಂತಪ್ಪ ಸಂಕ್ಲಾಪುರ ಹಾಗೂ ಬಣಜಾರ್ ಸಮಾಜದ ಮುಖಂಡರಾದ ರಾಮ ನಾಯ್ಕ್, ಬಂಗಾರಿ ನಾಯ್ಕ್, ರಮೇಶ್ ನಾಯ್ಕ್, ಸುರೇಶ್ ನಾಯ್ಕ್, ಶ್ರೀಮತಿ ವಿಜಯಲಕ್ಷ್ಮಿ ಸೇರಿದಂತೆ ಬಣಜಾರ್ ಸಮಾಜದ ಹಲವಾರು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
