ಬೆಂಗಳೂರು,ಮಾನ್ಯ ಮುಖ್ಯಮಂತ್ರಿಗಳೇ ತಮ್ಮ ಸಚಿವ ಸಂಪುಟದಲ್ಲಿ ನಗರಾಭಿವೃದ್ಧಿ (ಬೆಂಗಳೂರು ನಗರ ಹೊರತುಪಡಿಸಿ) ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಡಾಕ್ಟರ್ ಯತೀಂದ್ರರವರಿಗೆ ನಗರ ಅಭಿವೃದ್ಧಿ ಖಾತೆಯನ್ನು ಬದಲಿಸಿ ಬೇರೆ ಯಾವುದಾದರೂ ಖಾತೆಯನ್ನು ತಾವು ನೀಡಬೇಕಾಗಿ ಈ ಮೂಲಕ ತಮ್ಮಲ್ಲಿ ಕೋರಿಕೊಳ್ಳುತ್ತಿದ್ದೇವೆ ಎಂದು ನೈಜ ಹೋರಾಟಗಾರರ ವೇದಿಕೆ ಆಗ್ರಹಿಸಿದೆ.
ಇದಕ್ಕೆ ಪೂರಕವಾದ ಮುಖ್ಯ ಕಾರಣಗಳೇನೆಂದರೆ:
ಉಲ್ಲೇಖ 1ರಲ್ಲಿ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರರವರ ತಂದೆಯವರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎ1 ಮತ್ತು ಡಾಕ್ಟರ್ ಯತೀಂದ್ರರವರ ಮಾತೃಶ್ರೀ ಆದ ಶ್ರೀಮತಿ ಪಾರ್ವತಿಯವರು ಎ2 ಆಗಿರುತ್ತಾರೆ.
ಉಲ್ಲೇಖ 2ರಲ್ಲಿ ಶಾಸಕರು/ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಡಾಕ್ಟರ್ ಯತೀಂದ್ರರವರ ತಂದೆಯವರಾದ ಸನ್ಮಾನ್ಯ ಸಿದ್ದರಾಮಯ್ಯ V/s. ಸ್ನೇಹಮಯಿಕೃಷ್ಣ PCR 42/24 ಪ್ರಕರಣ ದಾಖಲಾಗಿದೆ.

ಉಲ್ಲೇಖ 3ರಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ರಿಟ್ ಅರ್ಜಿಯ ಸಂಖ್ಯೆ : 22319/24 ಪ್ರಕರಣ ದಾಖಲಾಗಿದೆ.
ಉಲ್ಲೇಖ 4ರಲ್ಲಿ ಜಾರಿ ನಿರ್ದೆಶನಾಲಯ ಇ.ಡಿ. ಸಂಖ್ಯೆ : ECIR/BGZO/49/24 ಪ್ರಕರಣಗಳು ಕೂಡಾ ದಾಖಲಾಗಿರುತ್ತದೆ.
ಈ ಮೇಲ್ಕಂಡ ಎಲ್ಲಾ ಪ್ರಕರಣಗಳಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಬದಲಿ ನಿವೇಶನ ಹಂಚಿಕೆಯ ಪ್ರಕರಣದಲ್ಲಿ ಸಚಿವರಾದ ಡಾ. ಯತೀಂದ್ರರವರ ತಂದೆ ಮತ್ತು ತಾಯಿಯವರು ಆರೋಪಿತರಾಗಿರುವುದರಿಂದ ಹಾಗೂ ಈ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗ ನಗರಾಭಿವೃದ್ಧಿ ಇಲಾಖೆಯ ಗುರುತರ ಜವಾಬ್ದಾರಿಯನ್ನು ಹೊಂದಿರುವ ಆರೋಪಿತರ ಮಗನಾಗಿರುವ ಡಾಕ್ಟರ್ ಯತೀಂದ್ರರವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ನಗರಾಭಿವೃದ್ಧಿ ಸಚಿವರ ಹೊಣೆಗಾರಿಕೆಯಿಂದ ಬಿಡುಗಡೆಗೊಳಿಸಿ ಬದಲಿ ಖಾತೆಯಲ್ಲಿ ಅವರನ್ನು ಸಚಿವರಾಗಿ ಕಾರ್ಯನಿರ್ವಹಿಸಲು ಮಾನ್ಯ ಮುಖ್ಯಮಂತ್ರಿಗಳಾದ ತಾವು ತಕ್ಷಣ ಕ್ರಮಕೈಗೊಳ್ಳಬೇಕೆಂದು ನೈಜ ಹೋರಾಟಗಾರರ ವೇದಿಕೆಯು ತಮ್ಮಲ್ಲಿ ವಿನಯಪೂರ್ವಕವಾದ ಆಗ್ರಹಪಡಿಸುತ್ತಿದೆ ಎಂದು ತಿಳಿಸಿದ್ದಾರೆ.

ಒಂದು ವೇಳೆ ಡಾಕ್ಟರ್ ಯತೀಂದ್ರರವರು ನಗರಾಭಿವೃದ್ಧಿ ಇಲಾಖೆಯ ಹೊಣೆ ಮುಂದುವರಿಸಿದ್ದಲ್ಲಿ ಸ್ವಹಿತಾಸಕ್ತಿಯ ಸಂಘರ್ಷವಾಗುತ್ತದೆ. ತಂದೆ ತಾಯಿಯ ರಕ್ಷಣೆಗಾಗಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಅನುಮಾನದ ಹುತ್ತ ಸಾರ್ವಜನಿಕರಲ್ಲಿ ಮೂಡುತ್ತದೆ. ಇದು ಸಹಜ ಕೂಡ ಎಂದಿದ್ದಾರೆ.
ಡಾಕ್ಟರ್ ಯತೀಂದ್ರರವರು ನಗರಾಭಿವೃದ್ಧಿ ಖಾತೆಯಲ್ಲಿ ಮುಂದುವರಿಸಿದ್ದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುತ್ತದೆ. ಹಾಗೂ ನ್ಯಾಯಾಂಗ ತತ್ವಗಳು ಇಂತಹ ಪ್ರಕರಣಗಳಲ್ಲಿ ಹಿತಾಸಕ್ತಿ ಸಂಘರ್ಷವನ್ನು ತಡೆಯಲು ಆರೋಪಿತರ ಮಗ ನಗರಾಭಿವೃದ್ಧಿ ಅಧಿಕಾರ ಸ್ಥಾನದಿಂದ ದೂರ ಸರಿಯಬೇಕು ಮತ್ತು ಈ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಗಳು ತನಿಖೆ ನಡೆಸಬೇಕಾಗುತ್ತದೆ.
ನ್ಯಾಯಾಂಗ ಮತ್ತು ಆಡಳಿತಾತ್ಮಕ ತತ್ವಗಳ ಪ್ರಕಾರ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ತಂದೆ ತಾಯಿಯೇ ಪ್ರಮುಖ ಆರೋಪಿಗಳಾಗಿದ್ದು, ಆರೋಪಿಗಳ ಮಗನೇ ಇಲ್ಲಿ ನಗರಾಭಿವೃದ್ಧಿ ಸಚಿವರಾಗಿ ಅಧಿಕಾರದಲ್ಲಿರುವುದು ಮತ್ತು ನಿರ್ಧಾರ ಕೈಗೊಳ್ಳುವುದು ಖಂಡಿತವಾಗಿಯೂ ಹಿತಾಸಕ್ತಿ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ.
ಕಾನೂನಿನಲ್ಲಿ ಹೇಳುವುದೇನಂದರೆ :
ಸೆಕ್ಷನ್ 167 & 169 (Public Servant farming incorrect document unlawful buying property) ಅಧಿಕಾರ ಬಳಸಿ ತಪ್ಪು ದಾಖಲೆಗಳನ್ನು ಸೃಷ್ಟಿಸುವುದು ಅಥವಾ ಕಾನೂನುಬಾಹಿರವಾಗಿ ಆಸ್ತಿಗಳನ್ನು ಖರೀದಿಸುವುದು ಅಪರಾಧವಾಗಿದ್ದು 2 ರಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ ಎಂದು ನೈಜ ಹೋರಾಟಗಾರರ ವೇದಿಕೆಯು ತಿಳಿಸಿದೆ.
ಸಾರ್ವಜನಿಕ ಸೇವೆಯಲ್ಲಿರುವವರು ತನ್ನ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವಾಗ ಆ ಅಧಿಕಾರವನ್ನು ತನ್ನ ವೈಯಕ್ತಿಕ, ಆರ್ಥಿಕ ಅಥವಾ ಕುಟುಂಬದ ಲಾಭಕ್ಕಾಗಿ ಬಳಸಿಕೊಳ್ಳುವುದನ್ನು ಹಿತಾಸಕ್ತಿ ಸಂಘರ್ಷ ಎನ್ನಲಾಗುತ್ತದೆ. ಇದು ಸಾರ್ವಜನಿಕರ ನಂಬಿಕೆಗೆ ಮಾಡುವ ದ್ರೋಹವಾಗಿದೆ. ಇದನ್ನೇ conflict of interest ಎಂದು ಕರೆಯಲಾಗುತ್ತದೆ.

ಈ ಎಲ್ಲಾ ಅಂಶಗಳನ್ನು ಕರ್ನಾಟಕದ ಮತದಾರರು, ಅತ್ಯಂತ ಸೂಕ್ಷ್ಮದಿಂದ ಗಮನಿಸುತ್ತಿದ್ದಾರೆ. ರಾಜ್ಯದಲ್ಲಿ ಪಾರದರ್ಶಕ ಆಡಳಿತವನ್ನು ನಿರೀಕ್ಷಿಸುವ ನಾಗರಿಕರಿಗೆ ಡಾಕ್ಟರ್ ಯತೀಂದ್ರರವರು ನಗರಾಭಿವೃದ್ಧಿ ಖಾತೆಯಲ್ಲೇ ಮುಂದುವರಿದರೆ ಈ ಪ್ರಕರಣದಲ್ಲಿ ನ್ಯಾಯ ಸಿಗುವುದು ಮರೀಚಿಕೆಯಾಗುತ್ತದೆ ಎಂದು ಭಾವಿಸುತ್ತಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ತಂದೆ ತಾಯಿಯೇ ಆರೋಪಿಗಳಾಗಿದ್ದು ಆರೋಪಿಗಳ ಮಗನೇ ನಗರಾಭಿವೃದ್ಧಿ ಇಲಾಖೆಯ ಹೊಣೆ ಹೊತ್ತಿರುವುದು ನ್ಯಾಯ ಸಮ್ಮತವಲ್ಲ ಮತ್ತು ಸಮಂಜಸವೂ ಅಲ್ಲ, ಅಧಿಕಾರದಲ್ಲಿರುವವರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದಾಗ ಅಥವಾ ವೈಯಕ್ತಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡಿದಾಗ ಸಂವಿಧಾನದ ಆರ್ಟಿಕಲ್ 311 ರಡಿಯಲ್ಲಿ ಅವರ ವಿರುದ್ಧ ಸಂವಿಧಾನಿಕವಾಗಿ ತನಿಖೆಯನ್ನು ನಡೆಸಬಹುದಾಗಿದೆ ಎಂಬುದು ನೈಜ ಹೋರಾಟಗಾರರ ವೇದಿಕೆಯ ಅಭಿಪ್ರಾಯವಾಗಿದೆ.
ಆದುದರಿಂದ ಗೌರವಾನ್ವಿತ ಮುಖ್ಯಮಂತ್ರಿಗಳಾದ ತಾವು ಈ ಪತ್ರ ತಲುಪಿದ ತಕ್ಷಣ ತಮ್ಮ ಸಚಿವ ಸಂಪುಟದಲ್ಲಿ ನಗರಾಭಿವೃದ್ಧಿ ಖಾತೆಯನ್ನು ನಿರ್ವಹಿಸುತ್ತಿರುವ ಡಾ. ಯತೀಂದ್ರರವರಿಗೆ ಬದಲಿ ಖಾತೆಯನ್ನು ನೀಡಿ ಅವರು ಕೂಡ ಯಾವುದೇ ಒತ್ತಡವಿಲ್ಲದ ಸಾರ್ವಜನಿಕರ ಸೇವೆ ಮಾಡಲು ತಾವು ಅನುವು ಮಾಡಿಕೊಟ್ಟಂತಾಗುತ್ತದೆ.
ಇದರಿಂದ ರಾಜ್ಯದ ನಾಗರಿಕರಲ್ಲಿ ಮೂಡಿರುವ ಅನುಮಾನಕ್ಕೆ ತೆರೆ ಎಳೆದಂತಾಗುತ್ತದೆ ಎಂದು ತಮ್ಮಲ್ಲಿ ಮತ್ತೊಮ್ಮೆ ನಾವು ವಿನಯಪೂರ್ವಕವಾಗಿ ಆಗ್ರಹಪಡಿಸುತ್ತಿದ್ದೇವೆ ಎಂದು ನೈಜ ಹೋರಾಟಗಾರರ ವೇದಿಕೆಯ ಪರವಾಗಿ ಹಿರಿಯ ಸಾಮಾಜಿಕ ಹೋರಾಟಗಾರರಾದ ಹೆಚ್.ಎಂ. ವೆಂಕಟೇಶ್ ಅಗ್ರಹಿಸಿದ್ದಾರೆ.


