ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದ ಅವ್ಯವಸ್ಥೆ ತಕ್ಷಣ ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಶಾಸಕರ ಖಡಕ್ ಸೂಚನೆ

ಶಿವಮೊಗ್ಗ

ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಕಂಡುಬಂದಿರುವ ಮೂಲಸೌಕರ್ಯಗಳ ಕೊರತೆ ಮತ್ತು ನಿರ್ವಹಣಾ ಲೋಪಗಳ ಬಗ್ಗೆ ಇಂದು ಶಿವಮೊಗ್ಗ ಶಾಸಕ ಚನ್ನಬಸಪ್ಪ ರವರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಾರ್ವಜನಿಕರು ಹಾಗೂ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಕೂಡಲೇ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪರಿಶೀಲನೆ ವೇಳೆ ಬಸ್ ನಿಲ್ದಾಣದ ಸುತ್ತಮುತ್ತಲಿನ ಫುಟ್‌ಪಾತ್‌ಗಳು ಹಾಳಾಗಿದ್ದು, ಹಲವು ಕಡೆ ಟೈಲ್ಸ್‌ಗಳು ಕಿತ್ತು ಹೋಗಿರುವುದು ಕಂಡುಬಂತು. ಅಲ್ಲದೆ ಹೂವಿನ ಹಾಗೂ ಹಣ್ಣಿನ ಅಂಗಡಿಗಳು ಫುಟ್‌ಪಾತ್‌ಗಳನ್ನು ಅತಿಕ್ರಮಿಸಿರುವ ಕಾರಣ ಪಾದಚಾರಿಗಳಿಗೆ ಸುರಕ್ಷಿತವಾಗಿ ಸಂಚರಿಸಲು ತೊಂದರೆಯಾಗುತ್ತಿರುವುದು ಗಮನಕ್ಕೆ ಬಂತು.

ಪ್ರಯಾಣಿಕರ ವಿಶ್ರಾಂತಿಗಾಗಿ ನಿರ್ಮಿಸಲಾದ ಬೆಡ್ ಹಾಲ್ ಅಸ್ವಚ್ಛವಾಗಿದ್ದು ದುರ್ವಾಸನೆ ಬೀರುತ್ತಿದೆ ಎಂದು ಪರಿಶೀಲನೆಯಲ್ಲಿ ತಿಳಿದುಬಂದಿದೆ. ಹಿಂದೆ ಅಳವಡಿಸಲಾಗಿದ್ದ ದೂರದರ್ಶನ (ಟಿವಿ) ಈಗ ಇಲ್ಲದಿರುವುದರಿಂದ, ಸರ್ಕಾರಿ ಯೋಜನೆಗಳು ಮತ್ತು ಸಾರ್ವಜನಿಕ ಮಾಹಿತಿ ಪ್ರಸಾರಕ್ಕೆ ಇದ್ದ ಅವಕಾಶವೂ ಕಳೆದುಹೋಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.ಬಸ್ ನಿಲ್ದಾಣದ ಆಸನಗಳ ಮೇಲೆ ಪಕ್ಷಿಗಳು ಮತ್ತು ಪ್ರಾಣಿಗಳ ಮಲಮೂತ್ರದಿಂದ ಗಲೀಜಾಗಿದ್ದು, ಅವುಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸದಿರುವುದು ಕಂಡುಬಂದಿದೆ.

ಮೊದಲ ಮಹಡಿಯಲ್ಲಿರುವ ಮಹಾನಗರ ಪಾಲಿಕೆ ಸುಪರ್ದಿಯ ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಇಲ್ಲದಿರುವುದು ಹಾಗೂ ಮಹಿಳಾ ಶೌಚಾಲಯಗಳಿಗೆ ಬಾಗಿಲುಗಳೇ ಇಲ್ಲದಿರುವುದು ಗಂಭೀರ ನಿರ್ಲಕ್ಷ್ಯವೆಂದು ಹೇಳಲಾಗಿದೆ.ಇದಲ್ಲದೆ, ನಿಲ್ದಾಣದಲ್ಲಿರುವ ಲಾಡ್ಜ್ ಸಾರ್ವಜನಿಕರ ಬಳಕೆಗೆ ಯೋಗ್ಯವಾಗದೆ ಸಂಪೂರ್ಣ ಅವ್ಯವಸ್ಥೆಯಲ್ಲಿದ್ದು, ಬಳಕೆಯಾಗದೆ ಇರುವ ಟಾಯ್ಲೆಟ್ ಬಾಕ್ಸ್‌ಗಳನ್ನು ಅಗತ್ಯವಿರುವ ಸ್ಥಳಗಳಿಗೆ ಸ್ಥಳಾಂತರಿಸಬೇಕೆಂಬ ಸಲಹೆಯೂ ವ್ಯಕ್ತವಾಯಿತು.

ಸಾರ್ವಜನಿಕರಿಗಾಗಿ ನಿರ್ಮಿಸಿರುವ ಕುಡಿಯುವ ನೀರಿನ ವ್ಯವಸ್ಥೆ ಕಾರ್ಯನಿರ್ವಹಿಸದಿರುವುದು ಮತ್ತು ಹೊಸದಾಗಿ ನಿರ್ಮಿಸಿದ ಕೆಲವು ಶೌಚಾಲಯಗಳಿಗೆ ಬೀಗ ಹಾಕಿ ಸಾರ್ವಜನಿಕ ಬಳಕೆಗೆ ತೆರೆಯದಿರುವುದೂ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.ಪ್ಲಾಟ್‌ಫಾರ್ಮ್ ಮೇಲೆಯೇ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತಿರುವುದರಿಂದ ಪ್ರಯಾಣಿಕರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳ ಕುರಿತು ಶಾಸಕ ಚನ್ನಬಸಪ್ಪ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡು, ತಕ್ಷಣ ದುರಸ್ತಿ ಹಾಗೂ ಸ್ವಚ್ಛತಾ ಕ್ರಮಗಳನ್ನು ಕೈಗೊಂಡು ಖಾಸಗಿ ಬಸ್ ನಿಲ್ದಾಣವನ್ನು ಸಾರ್ವಜನಿಕರಿಗೆ ಅನುಕೂಲಕರವಾಗುವಂತೆ ರೂಪಿಸಬೇಕು ಎಂದು ನಿರ್ದೇಶನ ನೀಡಿದರು.

ಸ್ಥಳೀಯರು ಮತ್ತು ಪ್ರಯಾಣಿಕರು ಕೂಡ ನಿಲ್ದಾಣದಲ್ಲಿ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ, ಪಾದಚಾರಿ ಮಾರ್ಗ ಮತ್ತು ಇತರೆ ಮೂಲಭೂತ ಸೌಲಭ್ಯಗಳನ್ನು ಶೀಘ್ರದಲ್ಲೇ ಸುಧಾರಿಸುವಂತೆ ಆಗ್ರಹಿಸಿದ್ದಾರೆ.

Author