ಶಿಕಾರಿಪುರ | ದಶಕಗಳ ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ತಾರ್ಕಿಕ ಹಾಗೂ ಶಾಶ್ವತ ಪರಿಹಾರ ನಿಟ್ಟಿನಲ್ಲಿ ಸಂಸದರ ನೇತೃತ್ವದಲ್ಲಿ ಮಹತ್ವದ ಜಂಟಿ ಸಭೆ

ಶಿವಮೊಗ್ಗ

ಶಿಕಾರಿಪುರ ತಾಲ್ಲೂಕಿನ ರೈತ ಬಾಂಧವರ ಹಾಗೂ ಸಾರ್ವಜನಿಕರ ದಶಕಗಳ ಪ್ರಮುಖ ತೊಂದರೆಗೆ ಕಾರಣವಾಗಿರುವ ಡೀಮ್ಡ್ ಫಾರೆಸ್ಟ್ (ಭಾವಿತ ಅರಣ್ಯ) ಸಮಸ್ಯೆಗೆ ತಾರ್ಕಿಕ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇಂದು ಶಿಕಾರಿಪುರದಲ್ಲಿ ಒಂದು ಮಹತ್ವದ ಜಂಟಿ ಸಮಾಲೋಚನಾ ಸಭೆಯನ್ನು ಸಂಸದ BYR ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಭೆಯಲ್ಲಿ ತಾಲ್ಲೂಕಿನ ತಹಶೀಲ್ದಾರರು, ವಲಯ ಅರಣ್ಯಾಧಿಕಾರಿಗಳು (RFO) ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಬರುವ ಜಮೀನುಗಳ ವಾಸ್ತವ ಸ್ಥಿತಿಗತಿ, ಗಡಿರೇಖೆ ಗೊಂದಲ ಆಗುತ್ತಿರುವ ತಾಂತ್ರಿಕ ಲೋಪದೋಷಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ.

ಸಭೆಯ ಕೊನೆಯಲ್ಲಿ, ಇಲಾಖೆಗಳ ನಡುವಿನ ಗೊಂದಲಗಳನ್ನು ತಕ್ಷಣವೇ ನಿವಾರಿಸಲು ಜಂಟಿ ಸರ್ವೆ ನಡೆಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನವನ್ನು ಸಂಸದರು ನೀಡಿದರು.

ಇದರೊಂದಿಗೆ, ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ಅರ್ಹ ಸಾಗುವಳಿ ಜಮೀನುಗಳನ್ನು ಮುಕ್ತಗೊಳಿಸಲು ಮತ್ತು ಮಲೆನಾಡಿನ ರೈತರ ಹಿತರಕ್ಷಣೆಯನ್ನು ಕಾಯ್ದುಕೊಳ್ಳಲು ಸರ್ಕಾರದ ಉನ್ನತ ಮಟ್ಟದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ಸಮಾಲೋಚಿಸಲಾಯಿತು.

ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ಕಾನೂನಾತ್ಮಕವಾಗಿ ಮತ್ತು ಆಡಳಿತಾತ್ಮಕವಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನು ನಿರಂತರವಾಗಿ ಮುಂದುವರೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಈ ಉನ್ನತ ಮಟ್ಟದ ಸಭೆಯು ಶಿಕಾರಿಪುರ ಕ್ಷೇತ್ರದ ಶಾಸಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಮತ್ತು ಪ್ರಮುಖರಾದ ಕೆ.ಎಸ್. ಗುರುಮೂರ್ತಿ ಅವರ ಉಪಸ್ಥಿತಿ ಹಾಗೂ ಜಂಟಿ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು ಎಂದು ತಿಳಿಸಿದ್ದಾರೆ .

Author