ಶಿವಮೊಗ್ಗ,ಸ್ನೇಹಿತರೊಂದಿಗೆ ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಅಪ್ರಾಪ್ತ ಬಾಲಕನೋರ್ವ ಈಜು ಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ.
ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕುರುಬರ ಪಾಳ್ಯ ಸ್ಮಶಾನದ ಹಿಂಭಾಗದ ನದಿ ತೀರದಲ್ಲಿ ಈ ಅವಘಡ ಸಂಭವಿಸಿದೆ.
ಮೃತಪಟ್ಟ ಬಾಲಕ ತನ್ನ 4-5 ಜನ ಸ್ನೇಹಿತರ ಗುಂಪಿನೊಂದಿಗೆ ತುಂಗಾ ನದಿಗೆ ಈಜಲು ಹೋಗಿದ್ದ. ಈ ವೇಳೆ ಈಜು ಬಾರದ ಕಾರಣ, ಆತ ನೀರಿನಲ್ಲಿ ಮುಳುಗಿದ್ದಾನೆ. ಬಾಲಕ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಜೊತೆಯಲ್ಲಿದ್ದವರು ಗಾಬರಿಗೊಂಡಿದ್ದಾರೆ.
ವಿಷಯ ತಿಳಿದ ತಕ್ಷಣ ಸ್ಥಳೀಯ ಮೀನುಗಾರರು ನದಿಗೆ ಇಳಿದು , ಯುವಕನನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ. ಆದರೆ ಅಷ್ಟರಲ್ಲಿ ಆತ ಸಾವನ್ನಪ್ಪಿದ್ದ. ಸದ್ಯ ಈ ಸಂಬಂಧ ದೊಡ್ಡಪೇಟೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.

