ಕೇರಳ ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಯಾದ 11 ದಿನಗಳ ನಂತರ ಕೇರಳ ಸಿಎಂ ಹೆಸರನ್ನು ಘೋಷಣೆ ಮಾಡಲಾಗಿದೆ. ವಿ ಡಿ ಸತೀಶನ್ ಅವರನ್ನು ನೂತನ ಸಿಎಂ ಆಗಿ ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಿದೆ.
ವಿಧಾನಸಭಾ ಚುನಾವಣೆಯ ಗೆಲುವಿನ ನಂತರ 11 ದಿನಗಳ ಕಾಲ ಇದ್ದ ಅನಿಶ್ಚಿತತೆಗೆ ಅಂತ್ಯ ಹಾಡಲಾಗಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯು, ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಅಧಿಕೃತವಾಗಿ ಇಂದು ಘೋಷಿಸಿದೆ.ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಅದ್ಭುತ ಗೆಲುವಿನತ್ತ ಮುನ್ನಡೆಸಿದ ಸತೀಶನ್, ಮುಂದಿನ ಐದು ವರ್ಷಗಳ ಕಾಲ ರಾಜ್ಯವನ್ನು ಮುನ್ನಡೆಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ನಿರ್ಣಾಯಕ ಘೋಷಣೆ ಮಾಡಲಾಗಿದೆ.
ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಕೆ.ಸಿ. ವೇಣುಗೋಪಾಲ್ ಅವರು ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕರಲ್ಲಿ ಹೆಚ್ಚಿನವರ ಬೆಂಬಲವನ್ನು ಹೊಂದಿದ್ದರೂ, ಹೈಕಮಾಂಡ್‌ನ ಸ್ಪಷ್ಟ ನಿರ್ದೇಶನಗಳನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವಿರೋಧ ಪಕ್ಷದ ನಾಯಕನಾಗಿ ಹಾಗೂ ಪಕ್ಷದ ಪ್ರಚಾರ ಸಮಿತಿ ಲೀಡರ್ ಆಗಿ ಅಸಾಧಾರಣ ನಾಯಕತ್ವದಿಂದ ಯುಡಿಎಫ್ ಗೆಲುವಿಗೆ ಕಾರಣರಾದ ಹಿನ್ನೆಲೆಯಲ್ಲಿ ಸತೀಶನ್ ಅವರನ್ನು ಆಯ್ಕೆ ಮಾಡಲಾಗಿದೆ.
ಅಂತಿಮ ಕ್ಷಣಗಳವರೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಸ್ಪರ್ಧಿಯಾಗಿ ಉಳಿದಿದ್ದ ರಮೇಶ್ ಚೆನ್ನಿತ್ತಲ ಅವರು ಮುಂಬರುವ ರಾಜ್ಯ ಸಚಿವ ಸಂಪುಟದಲ್ಲಿ ನಿರ್ಣಾಯಕ ಖಾತೆಯನ್ನು ಪಡೆಯುವ ಸಾಧ್ಯತೆ ಇದೆ.

