ಕೇರಳಂ,ತಿರುವನಂತಪುರಂ, ಕಾಂಗ್ರೆಸ್ನ ಬರೋಬ್ಬರಿ 10 ವರ್ಷಗಳ ಕಾಯುವಿಕೆ ಅಂತ್ಯಗೊಂಡಿದ್ದು, ಕೇರಳಂನಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಉತ್ತಮ ಪ್ರದರ್ಶನ ತೋರಿದ್ದು, ಬರೋಬ್ಬರಿ 99 ಕಡೆಗಳಲ್ಲಿ ಜಯಗಳಿಸಿದೆ. ಆ ಮೂಲಕ ಎಡಪಕ್ಷಗಳ ಮೈತ್ರಿ ಕೂಟ ಎಲ್ಡಿಎಫ್ನ 2 ಅವಧಿಯ ಆಳ್ವಿಕೆ ಅಂತ್ಯಗೊಂಡಿದೆ.
ಮುಖ್ಯಮಂತ್ರಿ ಯಾರಾಗಬೇಕೆಂಬ ಚರ್ಚೆ ಕಾಂಗ್ರೆಸ್ ಜೋರಾಗಿದ್ದು, ಸದ್ಯದಲ್ಲೇ ತೀರ್ಮಾನ ಹೊರ ಬೀಳಲಿದೆ. ಈ ಮಧ್ಯೆ ತಿರುವನಂತಪುರಂನಲ್ಲಿರುವ ಕೇರಳ ಪ್ರದೇಶ ಕಾಂಗ್ರೆಸ್ ಕಮಿಟಿಯ (KPCC) ಪ್ರಧಾನ ಕಚೇರಿಯಲ್ಲಿ ನಡೆದ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ನೂತನ ಶಾಸಕಿಯನ್ನು ಅಭಿನಂದಿಸಿ ಕಾಂಗ್ರೆಸ್ ಹಿರಿಯ ನಾಯಕ ತಬ್ಬಿಕೊಳ್ಳಲು ಮುಂದಾಗಿದ್ದು, ಆಕೆ ನಿರಾಕರಿಸಿದ್ದಾರೆ. ಈ ಘಟನೆಯ ವಿಡಿಯೊ ಇದೀಗ ಹರಿದಾಡುತ್ತಿದೆ.
https://x.com/i/status/2052320354681626992
ತಿರುವನಂತಪುರಂನ ಕೆಪಿಸಿಸಿ ಕಚೇರಿಯಲ್ಲಿ ಇತೀಚೆಗೆ ಸಭೆ ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಲು ಆಗಮಿಸಿದ ಕೊಲ್ಲಂನ ಶಾಸಕಿ ಬಿಂದು ಕೃಷ್ಣ ಅವರನ್ನು ತಬ್ಬಿಕೊಳ್ಳಲು ಕಾಂಗ್ರೆಸ್ ಹಿರಿಯ ನಾಯಕ ಚೆರಿಯನ್ ಫಿಲಿಪ್ ಮುಂದಾಗಿದ್ದಾರೆ.
ಇದರಿಂದ ಮುಜುಗರಕ್ಕೀಡಾದ ಬಿಂದು ಕೃಷ್ಣ ಕೈ ಮುಗಿದು ಚೆರಿಯನ್ ಫಿಲಿಪ್ನಿಂದ ಬಳಿಯಿಂದ ಆಚೆ ಹೋಗಲು ಯತ್ನಿಸುತ್ತಿರುವುದು ಕಂಡು ಬಂದಿದೆ. ಕಾಂಗ್ರೆಸ್ ನಾಯಕರು, ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲೇ ಈ ಘಟನೆ ನಡೆದಿದೆ. ವಿಡಿಯೊ ವೈರಲ್ ಆಗಿತ್ತಿದ್ದಂತೆ ನೆಟ್ಟಿಗರು ಚೆರಿಯನ್ ಫಿಲಿಪ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಚೇರಿಗೆ ಆಗಮಿಸಿದ 48 ವರ್ಷದ ಬಿಂದು ಕೃಷ್ಣ ಆರಂಭದಲ್ಲಿ ನೆರೆದ ನಾಯಕರನ್ನು ಅಭಿನಂದಿಸಿದ್ದಾರೆ. ಹಲವರ ಕೈ ಕುಲುಕಿದ್ದಾರೆ. ಈ ವೇಳೆ 71 ವರ್ಷದ ಚೆರಿಯನ್ ಫಿಲಿಪ್ ಅವರ ಬಳಿ ಬಂದಿದ್ದಾರೆ.
ಬಿಂದು ಆರಂಭದಲ್ಲಿ ಕೈ ಮುಂದೆ ಚಾಚಿದ್ದಾರೆ. ಆದರೂ ಚೆರಿಯನ್ ಬಿಂದು ಅವರನ್ನು ತಬ್ಬಿಕೊಳ್ಳಲು ಮುಂದಾಗಿದ್ದಾರೆ. ವಿಡಿಯೊದಲ್ಲಿ ಚೆರಿಯನ್ ತಮ್ಮ ಒಂದು ಕೈಯಿಂದ ಬಿಂದು ಅವರ ಕುತ್ತಿಗೆ ಬಳಸಿರುವುದು ಕಂಡು ಬಂದಿದೆ.
ಇದರಿಂದ ಮುಜುಗರಕ್ಕೀಡಾದ ಬಿಂದು ಕೈ ದೂರ ತಳ್ಳಲು ಯತ್ನಿಸುತ್ತಿರುವುದನ್ನು ಕಾಣಬಹುದು. ಜತೆಗೆ ಹೆಜ್ಜೆ ಹಿಂದಿಡಲು ಯತ್ನಿಸಿದಾಗಲೂ ಪ್ರಯತ್ನ ಬಿಡದ ಚೆರಿಯನ್ ಮತ್ತೊಮ್ಮೆ ತಬ್ಬಿಕೊಳ್ಳಲು ಮುಂದಾಗಿದ್ದಾರೆ. ಸದ್ಯ ಈ ದೃಶ್ಯ, ಚೆರಿಯನ್ ವರ್ತನೆ ಸಾಕಷ್ಟು ಟೀಕೆಗೆ ಗುರಿಯಾಗಿದೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಚೆರಿಯನ್ ಟ್ರೋಲ್ಗೆ ಆಹಾರವಾಗಿದ್ದಾರೆ. ಶಾಸಕಿ ಮುಜುಗರದಿಂದ ಹಿಂದೆ ಸರಿಯುತ್ತಿದ್ದರೂ ಚೆರಿಯನ್ ಮತ್ತೆ ಮತ್ತೆ ತಬ್ಬಿಕೊಳ್ಳಲು ಯತ್ನಿಸುತ್ತಿರುವುದು ಏಕೆ ಎಂದು ಹಲವರು ಪ್ರಶ್ನಿಸಿದ್ದಾರೆ.
ಮಹಿಳೆಯರ ಭಾವನೆ ಗೌರವಿಸಬೇಕು ಎಂದು ಹೇಳಿದ್ದಾರೆ. ಚೆರಿಯನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಚೆರಿಯನ್ ವರ್ತನೆ ನಾಚಿಕೆಗೇಡು ಎಂದು ಇನ್ನು ಕೆಲವರು ಕಿಡಿಕಾರಿದ್ದಾರೆ.

