ಜೈಲಿನಲ್ಲಿ ಸಹ-ಕೈದಿಗಳಿಂದ ಬೆದರಿಕೆ, ಬೈಗುಳ, ಕಿರುಕುಳ ; ನ್ಯಾಯಾಲಯದ ಬಳಿ ಕಷ್ಟ ಹೇಳಿಕೊಂಡ ನಟ ದರ್ಶನ್

ಬೆಂಗಳೂರು

ಬೆಂಗಳೂರು, ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ನಟ ದರ್ಶನ್, ಜೈಲಿನಲ್ಲಿ ತಮಗೆ ಎದುರಾಗುತ್ತಿರುವ ಸಂಕಷ್ಟಗಳ ಕುರಿತು ಸುಪ್ರೀಂ ಕೋರ್ಟ್ ಬಳಿ ಅಳಲು ತೋಡಿಕೊಂಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರು ಜಾಮೀನು ಪಡೆಯಲು ಹರಸಾಹಸ ಪಡುತ್ತಿದ್ದು, ಜಾಮೀನಿಗಾಗಿ ಅವರು ಸುಪ್ರೀಂ ಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ನಟ ದರ್ಶನ್ ಜೈಲಿನಲ್ಲಿ ತಮಗಾಗುತ್ತಿರುವ ಹತ್ತು ಹಲವು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.ಈ ಕುರಿತು ಮಾಧ್ಯಮವೊಂದು ವರದಿ ಮಾಡಿದ್ದು, ನಟ ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿ ಜೈಲಿನಲ್ಲಿ ತಮಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಅವರು ಎಳೆಎಳೆಯಾಗಿ ವಿವರಿಸಿದ್ದಾರೆ.

ದೀರ್ಘಕಾಲದ ಜೈಲುವಾಸದಿಂದ ವೃತ್ತಿ ಜೀವನಕ್ಕೆ ತೊಂದರೆ ಆಗಿದೆ. ಸಾಕ್ಷಿಗಳ ವಿಚಾರಣೆ ವಿಳಂಬ ಆಗುತ್ತಿದೆ ಎಂದು ಕೂಡ ಅವರು ಹೇಳಿದ್ದಾರೆ.

ಸಹಕೈದಿಗಳಿಂದ ಕಿರುಕುಳ, ಬೈಗುಳ

ಜೈಲಿನಲ್ಲಿ ಸಹ-ಕೈದಿಗಳಿಂದ ಬೆದರಿಕೆ ಹಾಕಲಾಗುತ್ತಿದೆ. ತಮ್ಮನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ನಿಯಮ ಮೀರಿ ತಮ್ಮನ್ನು ಕ್ವಾರಂಟೈನ್ ಸೆಲ್​ನಲ್ಲಿಡಲಾಗಿದೆ. ಇದರಿಂದ ಮಾನಸಿಕವಾಗಿ, ದೈಹಿಕವಾಗಿ ಹಾನಿಕಾರಕ ಪರಿಣಾಮವಾಗುತ್ತಿದೆ ಎಂದು ಜಾಮೀನು ಅರ್ಜಿಯಲ್ಲಿ ದರ್ಶನ್ ಅವರು ಕಷ್ಟ ಹೇಳಿಕೊಂಡಿದ್ದಾರೆ.

ಆಹಾರ, ಬಟ್ಟೆ, ಹಾಸಿಗೆ ಪಡೆಯಲೂ ಬಿಡುತ್ತಿಲ್ಲ

ಇದಲ್ಲದೆ ಜೈಲಿನಲ್ಲಿ ಸಹ-ಕೈದಿಗಳು ನಿಂದನೆ, ಮೂದಲಿಸುವುದು ಸೇರಿ ಹಲವು ರೀತಿ ಪ್ರಚೋದನೆ ನೀಡುತ್ತಿದ್ದಾರೆ. ಮಾಧ್ಯಮದಲ್ಲಿ ನೆಗೆಟಿವ್ ಪ್ರಚಾರದಿಂದ ಸಮಸ್ಯೆ ಬಿಗಡಾಯಿಸಿದೆ. ಜೈಲಿನಲ್ಲಿ ಇತರೆ ಕೈದಿಗಳಿಗಿಂತ ತಾರತಮ್ಯ ಮಾಡಲಾಗುತ್ತಿದೆ. ಕುಟುಂಬದವರ ಭೇಟಿಗೆ ಸಮಾನ ಸಮಯ ನೀಡುತ್ತಿಲ್ಲ.

ಆಹಾರ, ಬಟ್ಟೆ, ಹಾಸಿಗೆ ಪಡೆಯಲೂ ಬಿಡುತ್ತಿಲ್ಲ. ಜೈಲು ಸೆಲ್​ನ ಕಾರಿಡಾರ್​​ನಲ್ಲಿ ಮಾತ್ರ ವಾಕ್ ಮಾಡಲು ಬಿಡುತ್ತಿದ್ದಾರೆ. ಬೆನ್ನು ನೋವಿದ್ದರೂ ಕೇವಲ 2-3 ಮಾತ್ರ ಫಿಸಿಯೋಥೆರಪಿ ಮಾಡಲಾಗಿದೆ ಎಂದು ಜಾಮೀನು ಅರ್ಜಿಯಲ್ಲಿ ತಿಳಿಸಲಾಗಿದೆ.

ಸುದೀರ್ಘ ಜೈಲುವಾಸದಿಂದ ಜೀವನೋಪಾಯಕ್ಕೂ ಸಮಸ್ಯೆ ಆಗಿದೆ. ಪ್ರತಿ ವರ್ಷ 2 ಅಥವಾ 3 ಚಿತ್ರಗಳಿಗೆ ಸಹಿ ಮಾಡುತ್ತಿದ್ದೆ. ಜಾಮೀನು ರದ್ದುಪಡಿಸುವ ವೇಳೆಯೂ 3 ಸಿನಿಮಾಗಳಿಗೆ ಸಹಿ ಮಾಡಿದ್ದೆ. ಕೆವಿಎನ್ ಪ್ರೊಡಕ್ಷನ್ಸ್, ಮೀಡಿಯಾ ಹೌಸ್ ಸ್ಟೂಡಿಯೋಸ್​ನ ಸಿನಿಮಾಗಳಿಗೆ ಸಹಿ ಮಾಡಲಾಗಿತ್ತು.

ನಿರ್ಮಾಪಕರು 6 ಕೋಟಿ ರೂಪಾಯಿ ಬಂಡವಾಳ ಹೂಡಿದ್ದಾರೆ. ಜೈಲು ಸೇರಿದ್ದರಿಂದ ಸಿನಿಮಾ ನಿಂತುಹೋಗಿದೆ ಎಂದು ದರ್ಶನ್ ಸಮಸ್ಯೆ ಹೇಳಿಕೊಂಡಿದ್ದಾರೆ.ಹೊಸ ಚಿತ್ರಗಳನ್ನೂ ಕಳೆದುಕೊಂಡಿರುವುದರಿಂದ ನಷ್ಟ ಆಗಿದೆ. ಸುದೀರ್ಘ ಜೈಲುವಾಸವು ವೃತ್ತಿಜೀವನಕ್ಕೆ ಮರಣಗಂಟೆಯಾಗಲಿದೆ. ವೃತ್ತಿ ನಡೆಸುವ ಮೂಲಭೂತ ಹಕ್ಕಿನ ಹರಣವಾಗಲಿದೆ.

262 ಸಾಕ್ಷಿಗಳ ವಿಚಾರಣೆ ಆಗಬೇಕೆಂದು ಆರೋಪಪಟ್ಟಿ ಸಲ್ಲಿಸಲಾಗಿದೆ.8 ತಿಂಗಳಿನಿಂದ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ಆಗಿದೆ ಶೀಘ್ರದಲ್ಲಿ ಸಾಕ್ಷ್ಯ ವಿಚಾರಣೆ ಮುಗಿಯುವ ಲಕ್ಷಣಗಳಿಲ್ಲ.

ಹೀಗಾಗಿ ಜಾಮೀನು ನೀಡುವಂತೆ ದರ್ಶನ್ ಮನವಿ ಸಲ್ಲಿಸಿದ್ದಾರೆ.ಅಂದಹಾಗೆ ಸೋಮವಾರ (ಮೇ 4)ರ ಇಂದು ಸುಪ್ರೀಂಕೋರ್ಟ್​​ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈ ಮೊದಲು ಅವರಿಗೆ ನೀಡಿದ್ದ ಜಾಮೀನನ್ನು ರದ್ದು ಮಾಡಲಾಗಿತ್ತು.

Author