ಬೆಳಗಾವಿ,ಇಂದಿನ ಮಕ್ಕಳು ಆನ್‌ಲೈನ್ ಗೇಮ್ಸ್, ರೀಲ್ಸ್ಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇಂಥ ಮಕ್ಕಳ ನಡುವೆ ಬೆಳಗಾವಿಯ 12 ವರ್ಷದ ಬಾಲಕಿ ಭಾರತೀಯ ಸಂಸ್ಕೃತಿ ಸಾರುವ ಶಿಶುಗೀತೆ (ರೈಮ್ಸ್) ಒಳಗೊಂಡ ಕವನ ಸಂಕಲನ ರಚಿಸಿ ಎಲ್ಲರ ಮೆಚ್ಚುಗೆಗಳಿಸಿದ್ದಾಳೆ.
ಆ ಇಂಗ್ಲಿಷ್ ಪುಸ್ತಕವನ್ನು ದೇಶದ ಹೆಸರಾಂತ ಲೇಖಕ ಚೇತನ್ ಭಗತ್ ಅವರು ಇತ್ತೀಚಿಗೆ ಬಿಡುಗಡೆಗೊಳಿಸಿದ್ದಾರೆ.ದ್ವಾರಕಾ ನಗರದ ಲಾವಣ್ಯ ಪೃಥ್ವಿರಾಜ್ ಕಮ್ಮಾರ ಎಂಬ ಬಾಲಕಿ ಚಿಕ್ಕ ವಯಸ್ಸಿನಲ್ಲಿಯೇ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ನಗರದ ಬಿರ್ಲಾ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ 6ನೇ ತರಗತಿ ಪೂರ್ಣಗೊಳಿಸಿರುವ ಬಾಲಕಿಯ ತಂದೆ ಪೃಥ್ವಿರಾಜ್ ಬಿಲ್ಡರ್ ಆ್ಯಂಡ್ ಡೆವಲಪರ್ ಆಗಿದ್ದು, ತಾಯಿ ತಿಲೋತ್ತಮ ಅವರು ಗೃಹಿಣಿ.12ನೇ ವಯಸ್ಸಿನಲ್ಲೇ ಕವನ ಸಂಕಲನ ರಚಿಸಿದ ಬೆಳಗಾವಿಯ ಬಾಲಕಿ ಲಾವಣ್ಯ ಭಾರತೀಯ ಸಂಸ್ಕೃತಿ, ವೀರಪುರುಷರು, ಮಹಿಳೆಯರು ಹಾಗೂ ಹಲವು ಮಹನೀಯರ ವ್ಯಕ್ತಿತ್ವ ಆಧರಿಸಿ ಶಿಶುಗೀತೆ(ರೈಮ್ಸ್)ಗಳನ್ನು ರಚಿಸಿದ್ದು, ‘ದಿ ಶ್ಯಾಡೋ ಆಫ್ ಇನೋಸೆನ್ಸ್ ಆ್ಯಂಡ್ ಇಮ್ಯಾಜಿನೇಷನ್-ರೈಮ್ಸ್ ಫ್ರಮ್ ಬೆಳಗಾವಿ ಟು ಭಾರತ’ ಎಂಬ ಶೀರ್ಷಿಕೆಯಡಿ ಕವನ ಸಂಕಲನ ರಚಿಸಿದ್ದಾಳೆ.
ಈ ಪುಸ್ತಕವನ್ನು ಏಪ್ರಿಲ್ 18ರಂದು ಮುಂಬೈನಲ್ಲಿ ಚೇತನ್ ಭಗತ್ ಅವರು ಲೋಕಾರ್ಪಣೆಗೊಳಿಸಿ, ಲಾವಣ್ಯಳ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ಪೂರ್ವ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್’ ಅಥವಾ ‘ಜಾಕ್ ಆ್ಯಂಡ್ ಜಿಲ್’ ನಂತಹ ಪಾಶ್ಚಾತ್ಯ ಮೂಲದ ಕವಿತೆಗಳನ್ನು ಕಲಿಸುವುದು ಸಾಮಾನ್ಯ. ಆದರೆ, ನಮ್ಮ ದೇಶದ ಮಕ್ಕಳಿಗೆ, ಭಾರತೀಯ ಸಂಸ್ಕೃತಿ, ಮೌಲ್ಯಗಳು ಮತ್ತು ನಾಯಕರನ್ನು ಪರಿಚಯಿಸಬೇಕು. ನಮ್ಮತನದ ಶಿಶುಗೀತೆಗಳ ಮೂಲಕ ಮಕ್ಕಳಿಗೆ ನಮ್ಮ ದೇಶದ ಇತಿಹಾಸವನ್ನು ತಿಳಿಸುವ ಉದ್ದೇಶದಿಂದ ಈ ಪುಸ್ತಕವನ್ನು ರಚಿಸಿದ್ದೇನೆ ಎಂದು ಲಾವಣ್ಯ ಹೇಳಿದರು.

