ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದ ಆರೋಪದ ಹಿನ್ನೆಲೆ ಕಾಂಗ್ರೆಸ್ ಪಕ್ಷದಿಂದ ಜಿಲ್ಲೆಯ ಆರು ಜನ ಮುಖಂಡರನ್ನು ಉಚ್ಚಾಟಿಸಲಾಗಿದೆ.
ಇದೇ ಆರೋಪದ ಹಿನ್ನೆಲೆಯಲ್ಲಿ ಹಾಲಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರ ವಿರುದ್ಧ ಈಗಾಗಲೇ ಪಕ್ಷ ಶಿಸ್ತು ಕ್ರಮ ಕೈಗೊಂಡಿತ್ತು.
ಎಮ್ಎಲ್ಸಿ ಅಬ್ದುಲ್ ಜಬ್ಬಾರ್ ಪರ ನಿಂತಿದ್ದ ಎಂ.ಟಿ.ಸುಭಾಷ್ ಚಂದ್ರ, ಮಾಜಿ ವಕ್ಫ್ ಬೋರ್ಡ್ ಅಧ್ಯಕ್ಷ ಸಿರಾಜ್ ಅಹ್ಮದ್, ಕಾಂಗ್ರೆಸ್ ಮುಖಂಡ ಘನಿ ತಾಹೇರ್, ಕಡತಿ ತಿಪ್ಪೇಶ್, ಯು ಎಂ ಮನ್ಸೂರ್ ಅಲಿ, ಇನಾಯತ್ ವುಲ್ಲಾ ಖಾನ್ ಅವರನ್ನು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಹೆಚ್ ಬಿ ಮಂಜಪ್ಪ ಅವರು ತಿಳಿಸಿದರು.
ಈಗಾಗಲೇ ಉಚ್ಚಾಟನೆ ಆಗಿರುವ ಅಬ್ದುಲ್ ಜಬ್ಬಾರ್ ಅವರನ್ನು ವಾಪಾಸ್ ಪಕ್ಷಕ್ಕೆ ಕರೆತರವುದು ಬೇಡ. ಎಐಸಿಸಿ ಕೆಪಿಸಿಸಿ ಆರು ವರ್ಷ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಅದರೂ ಅವರನ್ನು ವಾಪಾಸ್ ಕರೆತರಲು ಪ್ರಯತ್ನ ನಡೆದಿದ್ದು, ಇದಕ್ಕೆ ನಮ್ಮ ವಿರೋಧ ಇದೆ ಎಂದು ಅಸಮಾಧಾನ ಹೊರಹಾಕಿದ್ರು.
ಜಬ್ಬಾರ್ ಅವರನ್ನು ವಾಪಸ್ ಪಕ್ಷಕ್ಕೆ ಕರೆತಂದ್ರೆ ಪ್ರತಿಭಟನೆ :
ಉಪಚುನಾವಣೆ ವೇಳೆ ಕೆಲವರು ಪಕ್ಷಕ್ಕೆ ಅವಮಾನ ಆಗುವಂತೆ ನಾಯಕರನ್ನು ನಿಂದಿಸಿದ್ದರು. ಈ ಹಿನ್ನೆಲೆಯಲ್ಲಿ ಒಟ್ಟು ಆರು ಜನರನ್ನು ಉಚ್ಚಾಟಿಸಲಾಗಿದೆ. ಇವರ ಪಕ್ಷ ವಿರೋಧಿ ಚಟುವಟಿಕೆ ಗಮನಕ್ಕೆ ಬಂದಿದೆ. ಪಕ್ಷಕ್ಕೆ ಡ್ಯಾಮೇಜ್ ಮಾಡಿದ್ದಾರೆ.
ಕಾಂಗ್ರೆಸ್ ಅಲ್ಪಸಂಖ್ಯಾತ ವಿರೋಧಿ ಎಂದು ಬಿಂಬಿಸಿದ್ದರು. ಆದ್ದರಿಂದ ಇವರ ವಿರುದ್ಧ ಕೆಪಿಸಿಸಿಗೆ ಕಳುಹಿಸಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದೇವೆ. ಈಗಾಗಲೇ ಉಚ್ಚಾಟನೆ ಆಗಿರುವ ಅಬ್ದುಲ್ ಜಬ್ಬಾರ್ ಅವರನ್ನು ಮತ್ತೆ ಪಕ್ಷಕ್ಕೆ ಕರೆತರಕೂಡದು ಎಂದು ಮನವಿ ಮಾಡಿದ್ದೇವೆ. ಅಬ್ದಲ್ ಜಬ್ಬಾರ್ ಅವರನ್ನು ಪಕ್ಷಕ್ಕೆ ಕರೆ ತಂದ್ರೆ ಪ್ರತಿಭಟನೆ ಮಾಡುತ್ತೇವೆ ಎಂದು ಹೆಚ್ ಬಿ ಮಂಜಪ್ಪ ಎಚ್ಚರಿಸಿದ್ದಾರೆ.
ಎಮ್ಎಲ್ಸಿ ಸ್ಥಾನದಿಂದ ಜಬ್ಬಾರ್ ಉಚ್ಚಾಟನೆ ಆಗ್ಬೇಕು :
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಮಾತನಾಡಿ, “ಜಬ್ಬಾರ್ ಸಾಹೇಬ್ರು ಉಚ್ಚಾಟನೆ ಸಂಬಂಧ ಪತ್ರಿಕಾಗೋಷ್ಠಿ ಕರೆದಿದ್ದೇವೆ. ಆರು ಜನ ಪಕ್ಷ ವಿರೋಧಿ ಕೆಲಸ ಮಾಡಿರುವ ವಿಡಿಯೋವನ್ನು ಪ್ರದರ್ಶನ ಮಾಡಿದ್ದೇವೆ. ಈ ಮೂಲಕ ಪಕ್ಷ ವಿರೋಧಿ ಕೆಲಸ ಮಾಡಿದ್ದನ್ನು ಜನರ ಗಮನಕ್ಕೆ ತಂದಿದ್ದೇವೆ. ಅಬ್ದಲ್ ಜಬ್ಬಾರ್ರ ಉಚ್ಚಾಟನೆ ಸ್ವಾಗತ ಮಾಡಿದ್ದೇನೆ. ಅವರನ್ನು ವಾಪಾಸ್ ಪಕ್ಷಕ್ಕೆ ಕರೆತಂದ್ರೇ ನಾವೇ ಕೆಪಿಸಿಸಿ ಮುಂದೆ ಪ್ರತಿಭಟನೆ ಮಾಡುತ್ತೇವೆ. ಅವರನ್ನು ಎಮ್ಎಲ್ಸಿ ಸ್ಥಾನದಿಂದ ಉಚ್ಚಾಟನೆ ಮಾಡ್ಬೇಕು” ಎಂದು ಆಗ್ರಹಿಸಿದರು.
ಮಾಜಿ ಮೇಯರ್ ಚಮನ್ ಸಾಬ್ ಮಾತನಾಡಿ ,”ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುವವರು ಯೋಚನೆ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಪಂ ಚುನಾವಣೆಗಳು ಬರಲಿದೆ. ಅ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಮುಸ್ಲಿಂ ಅಭ್ಯರ್ಥಿಗಳಿಗೆ ಅನ್ಯಾಯ ಆಗಲಿದೆ. ರಾಜಕೀಯದಲ್ಲಿ ಧರ್ಮ ಸಮಾಜ ಬೆರೆಸುತ್ತಿದ್ದಾರೆ. ಇದರಿಂದ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧೆ ಮಾಡುವ ಮುಸ್ಲಿಂ ಅಭ್ಯರ್ಥಿಗಳ ಮೇಲೆ ಪರಿಣಾಮ ಉಂಟಾಗಲಿದೆ. ಕೆಲವರ ಷಡ್ಯಂತ್ರಕ್ಕೆ ಮುಸ್ಲಿಂರು ಬಲಿಯಾಗಬೇಡಿ. ಮುಸ್ಲಿಂರು ಕಾಂಗ್ರೆಸ್ ಪಕ್ಷದ ಉಸಿರು, ಪಕ್ಷ ಅವರನ್ನು ಕೈ ಬಿಡುವುದಿಲ್ಲ ಎಂದು ಹೇಳಿದರು.

