ಬೆಂಗಳೂರು, ಸಿಲಿಕಾನ್ ಸಿಟಿಯಲ್ಲಿ ಇಂದು ಸಂಜೆ ಅಬ್ಬರಿಸಿದ ಭಾರೀ ಮಳೆಗೆ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದಿದ್ದು, ದುರ್ಘಟನೆಯಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸಂಜೆ ಸುರಿದ ಧಾರಾಕಾರ ಮಳೆಯ ಆರ್ಭಟಕ್ಕೆ ತಡೆಯಲಾರದೆ ಆಸ್ಪತ್ರೆಯ ಗೋಡೆಯು ದಿಢೀರನೆ ಕುಸಿದು ಬಿದ್ದಿದೆ ಎಂದು ತಿಳಿದುಬಂದಿದೆ.
ಇವತ್ತು ಸಂಜೆ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಗೋಡೆ (ಕಾಂಪೌಂಡ್) ಕುಸಿದು ಬಿದ್ದಿದೆ. ಗೋಡೆ ಕುಸಿತದಿಂದಾಗಿ 8 ಮಂದಿ ಮೃತಪಟ್ಟಿದ್ದಾರೆ.
ಬೌರಿಂಗ್ ಆಸ್ಪತ್ರೆಯ ಹೊರಗೆ ತಳ್ಳುಗಾಡಿಯಲ್ಲಿ, ಫುಟ್ಪಾತ್ ಮೇಲೆ ಕೆಲವರು ವ್ಯಾಪಾರ ಮಾಡುತ್ತಿದ್ದರು. ಗೋಡೆ ಕುಸಿತದಿಂದಾಗಿ ವ್ಯಾಪಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾಂಪೌಂಡ್ ಕೆಳಗೆ ಸಿಲುಕಿದ್ದ 3 ಮಕ್ಕಳು ಸೇರಿ 8 ಜನ ಉಸಿರು ಚೆಲ್ಲಿದ್ದಾರೆ. ಮೃತಪಟ್ಟವರ ಪೈಕಿ ಪಾದಚಾರಿಗಳೂ ಇರಬಹುದು ಎಂಬ ಶಂಕೆ ಸಹ ವ್ಯಕ್ತವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಗೋಡೆ ಕುಸಿದ ಬೆನ್ನಲ್ಲೇ ಸ್ಥಳದಲ್ಲಿದ್ದ ಸಾರ್ವಜನಿಕರು ರಕ್ಷಣಾ ಕಾರ್ಯ ನಡೆಸಿ ಕೆಲವರನ್ನ ರಕ್ಷಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಬೌರಿಂಗ್ ಆಸ್ಪತ್ರೆಯ ಹಳೆಯ ಗೋಡೆಗೆ ದೊಡ್ಡ ಟಾರ್ಪಾಲ್ ಹಾಕಿ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದರು. ದಿಢೀರನೆ ಜೋರಾಗಿ ಮಳೆ ಸುರಿದ ಪರಿಣಾಮ ಟಾರ್ಪಾಲ್ ಕೆಳಗೆ ಪಾದಚಾರಿಗಳು ನಿಂತುಕೊಂಡರು. ಈ ವೇಳೆ ಬಿರುಗಾಳಿ ಸಮೇತ ಸುರಿದ ಜೋರು ಮಳೆಗೆ ಕಾಂಪೌಂಡ್ ಕುಸಿದು ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

