ಶಿಕಾರಿಪುರ, ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ನಕಲಿ ಪಿಎಚ್.ಡಿ ಪ್ರಮಾಣಪತ್ರ ನೀಡಿ ಕರ್ತವ್ಯ ನಿರ್ವಹಿಸುತ್ತಿದ್ದ ವಾಣಿಜ್ಯ ವಿಭಾಗದ ಅತಿಥಿ ಉಪನ್ಯಾಸಕ ಮಾದೇಶ ಪ್ರಭು ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ.
2015ರಲ್ಲಿ ಉತ್ತರ ಪ್ರದೇಶದ ಝಾನ್ಸಿಯಲ್ಲಿರುವ ಬುಂದೇಲ್ಖಂಡ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪೂರ್ಣಗೊಳಿಸಿರುವುದಾಗಿ ಪ್ರಮಾಣಪತ್ರವನ್ನು ಸಲ್ಲಿಸಿದ್ದರು.
ಇತ್ತೀಚೆಗೆ ಪದವಿ ಪ್ರಮಾಣಪತ್ರಗಳ ನೈಜತೆಯನ್ನು ಪರಿಶೀಲಿಸುವಂತೆ ಸರ್ಕಾರವು ಸುತ್ತೋಲೆ ಹೊರಡಿಸಿತ್ತು.ಸರ್ಕಾರದ ಸೂಚನೆಯ ಮೇರೆಗೆ ಕಾಲೇಜು ಮಟ್ಟದ ಪರಿಶೀಲನಾ ಸಮಿತಿಯು ಬುಂದೇಲ್ಖಂಡ ವಿಶ್ವವಿದ್ಯಾಲಯದೊಂದಿಗೆ ಅಧಿಕೃತವಾಗಿ ಸಂವಹನ ನಡೆಸಿ ಮಾಹಿತಿಯನ್ನು ಕಲೆಹಾಕಿತ್ತು.
ಈ ವೇಳೆ ಮಾದೇಶ ಪ್ರಭು ಅವರು ಸದರಿ ವಿಶ್ವವಿದ್ಯಾಲಯದಿಂದ ಯಾವುದೇ ಪಿಎಚ್.ಡಿ ಪದವಿಯನ್ನು ಪಡೆದಿಲ್ಲ ಎಂಬ ಅಂಶ ದೃಢಪಟ್ಟಿದೆ.ಈ ಹಿನ್ನೆಲೆಯಲ್ಲಿ ಕಾಲೇಜಿನ ಪರಿಶೀಲನಾ ಸಮಿತಿಯು ಸಭೆ ಸೇರಿ ಚರ್ಚಿಸಿ, ನಕಲಿ ದಾಖಲೆ ಒದಗಿಸಿದ ಕಾರಣಕ್ಕಾಗಿ ಅವರನ್ನು ಶುಕ್ರವಾರ ಸೇವೆಯಿಂದ ವಜಾಗೊಳಿಸಿದೆ.
ವಾಣಿಜ್ಯ ವಿಭಾಗದ ಅತಿಥಿ ಉಪನ್ಯಾಸಕರಾಗಿದ್ದ ಮಾದೇಶ ಪ್ರಭು ಅವರು ಸಲ್ಲಿಸಿದ್ದ ಪಿಎಚ್.ಡಿ ಪದವಿ ಪ್ರಮಾಣಪತ್ರವು ನಕಲಿಯಾಗಿರುವ ಕಾರಣಕ್ಕೆ ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಪ್ರಾಚಾರ್ಯ ಚನ್ನೇಶ್ ತಿಳಿಸಿದ್ದಾರೆ.


