ಹುಲಿಕಲ್ ಬಾಳೆಬರೆ ಘಾಟಿ ಮಣ್ಣು ಕುಸಿತ ದುರ್ಘಟನೆ ಸ್ಥಳಕ್ಕೆ ಶಾಸಕರು ಮತ್ತು ಜಿಲ್ಲಾಧಿಕಾರಿಗಳಿಂದ ಭೇಟಿ-ಪರಿಶೀಲನೆ

ರಾಜಕೀಯ

ಶಿವಮೊಗ್ಗ,ಜಿಲ್ಲೆಯ ಹೊಸನಗರ ತಾಲ್ಲೂಕಿನ ಹುಲಿಕಲ್ ಬಾಳೆಬರೆ ಘಾಟಿ ಬಳಿ ಕಾಮಗಾರಿ ನಡೆಯುತ್ತಿದ್ದ ವೇಳೆ ಸಂಭವಿಸಿದ ಮಣ್ಣು ಕುಸಿತದ ಘಟನೆಯಲ್ಲಿ ಮೂರು ಜನ ಕಾರ್ಮಿಕರು ಮೃತಪಟ್ಟಿದ್ದು, ಘಟನಾ ಸ್ಥಳಕ್ಕೆ ಶುಕ್ರವಾರ ಬೆಳಿಗ್ಗೆ ಶಾಸಕರಾದ ಆರಗ ಜ್ಞಾನೇಂದ್ರ ಮತ್ತು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮಣ್ಣು ಕುಸಿತದ ದುರ್ಘಟನೆಯಲ್ಲಿ ಹೊಸನಗರ ತಾಲ್ಲೂಕಿನ ಕೋಟೆ ಶಿರೂರಿನ ಓರ್ವ ಕಾರ್ಮಿಕ ಮತ್ತು ಹಾವೇರಿ ತಾಲ್ಲೂಕಿನ ನೆಲೊಗಲ್ಲು ಗ್ರಾಮದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ನಾಲ್ಕು ಜನ ಕಾರ್ಮಿಕರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ನಗರ, ತೀರ್ಥಹಳ್ಳಿ ಮತ್ತು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಮುಂದಿನ ಕ್ರಮದ ಕುರಿತು ಸೂಚನೆಗಳನ್ನು ನೀಡಿದರು.

ನಂತರ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಮೃತರ ಸಂಭಂಧಿಕರೊಂದಿಗೆ ಮಾತನಾಡಿ, ಸಾಂತ್ವನ ಹೇಳಿದರು.

ಹಾಗೂ ಮೃತ ಕಾರ್ಮಿಕರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಸಾಗರ ಉಪವಿಭಾಗದ ಎಸಿ ವೀರೇಶ್, ಹೊಸನಗರ ತಹಶೀಲ್ದಾರ್ ಭರತ್ ಕುಮಾರ್, ಪಿಡಬ್ಲುö್ಯಡಿ ಮುಖ್ಯ ಅಭಿಯಂತರರು, ಎಇಇ ಇತರೆ ಅಧಿಕಾರಿಗಳು ಹಾಜರಿದ್ದರು.

Author