ಪೊಲೀಸ್ ಇಲಾಖೆ ಆಸ್ತಿ ಕಬಳಿಕೆ ಯತ್ನ ; ಶಿವಮೊಗ್ಗದ ಶ್ರೀನಾಥ್‌ ನಗರಗದ್ದೆ ಸೇರಿ ಮೂವರ ಬಂಧನ

ಬೆಂಗಳೂರು

ಬೆಂಗಳೂರು ,ಪೊಲೀಸ್‌ ಇಲಾಖೆಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಅಸ್ತಿಯನ್ನು ಕಬಳಿಸಲು ಯತ್ನಿಸಿದ ಪ್ರಕರಣದಲ್ಲಿ ಶಿವಮೊಗ್ಗದ ವ್ಯಕ್ತಿ ಸೇರಿ ಮೂವರನ್ನು ಬೆಂಗಳೂರಿನ ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗದ ಶ್ರೀನಾಥ್‌ ನಗರಗದ್ದೆ, ಮೈಸೂರಿನ ಎಂ.ಆ‌ರ್. ಮಹಾಲಕ್ಷ್ಮೀ ಹಾಗೂ ತುಮಕೂರಿನ ಕೃಷ್ಣಮೂರ್ತಿ ಬಂಧಿತರು. ಬೆಂಗಳೂರಿನ ಪೊಲೀಸ್ ವಸತಿಗೃಹದಲ್ಲಿನ ಜಾಗದ ನಕಲಿ ದಾಖಲೆ ಸೃಷ್ಟಿಸಿ ಮಾರಾಟಕ್ಕೆ ಯತ್ನಿಸಿದ್ದರು ಎನ್ನಲಾಗಿದೆ.

ಸುಮಾರು 80 ಕೋಟಿ ರೂ. ಮೌಲ್ಯದ ಆಸ್ತಿಯ ಹೆಸರಿನ ಮೇಲೆ ನಕಲಿ ದಾಖಲಿ ಸೃಷ್ಟಿಸಿ ಕಬಳಿಕೆಗೆ ಯತ್ನಿಸಿದ್ದಾರೆಂಬ ಆರೋಪ, ಆರೋಪಿಗಳ ವಿರುದ್ಧ ಕೇಳಿಬಂದಿದೆ.

ಎಂ.ಆರ್. ಮಹಾಲಕ್ಷ್ಮೀ ಮೊದಲನೇ ಆರೋಪಿ, ಆರ್.ಕೃಷ್ಣಮೂರ್ತಿ ಎರಡನೇ ಆರೋಪಿ ಮತ್ತು ಶ್ರೀನಾಥ್ ನಗರಗದ್ದೆ ಅವರು ಮೂರನೇ ಆರೋಪಿಯಾಗಿದ್ದಾರೆ.

ಇದೇ ಪ್ರಕರಣದಲ್ಲಿ ಬೆಸ್ಕಾಂ ಮತ್ತು ಬಿಬಿಎಂಪಿ ಅಧಿಕಾರಿಗಳ ವಿರುದ್ಧವೂ ಎಫ್‌ಐಆ‌ರ್ ದಾಖಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಲೋಕಾಯುಕ್ತ ಇನ್ಸ್‌ಪೈರ್‌ ಎಂ.ಕುಮಾರ್ ನೀಡಿದ ದೂರಿನನ್ವಯ ಮಾ.11ರಂದು ಪ್ರಕರಣ ದಾಖಲಾಗಿತ್ತು.

ವಸತಿ ಗೃಹದಲ್ಲಿ ವಾಸವಾಗಿದ್ದ ಇನ್ಸ್‌ಪೆಕ್ಟ‌ರ್ ಕುಮಾ‌ರ್ ಅವರ ಮನೆಗೆ ಬೆಸ್ಕಾಂ ಅಧಿಕಾರಿಗಳು ನೀಡಿದ್ದ ವಿದ್ಯುತ್ ಬಿಲ್‌ನಲ್ಲಿ ಮಹಾಲಕ್ಷ್ಮೀ ಹೆಸರು ನಮೂದಾಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿತ್ತು.

Author