ಶಿವಮೊಗ್ಗ, SDMC ಜಿಲ್ಲಾಧ್ಯಕ್ಷರಾದ ವೀರಚಾರ್ ರವರು ಅವೈಜ್ಞಾನಿಕ ಮ್ಯಾಗ್ನೆಟ್ ಮತ್ತು ಕೆ ಪಿ ಎಸ್ ಶಾಲೆ ಕುರಿತಾಗಿ ವಿಶೇಷ ವರದಿ ಮುಖಾಂತರ ಈ ಕೆಳಕಂಡ ಲೇಖನ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದಾರೆ.
ಶಿಕ್ಷಣವು ಸಮಾಜ ನಿರ್ಮಾಣದ ಮೂಲ ಆಧಾರಸ್ತಂಭ. ವಿಶೇಷವಾಗಿ ಹಳ್ಳಿ ಎಂಬುದು ಪ್ರಜಾಪ್ರಭುತ್ವದ ನಿಜವಾದ ಬೇರು. ಹಳ್ಳಿಗಳ ಮಕ್ಕಳ ಅಭಿವೃದ್ಧಿ ಅವರ ಸಬಲೀಕರಣ ಮತ್ತು ಜ್ಞಾನವೃದ್ಧಿ ಸಾಧ್ಯವಾಗುವುದು ಸರ್ಕಾರವು ಹಳ್ಳಿಯ ಶಾಲೆಗಳನ್ನು ಬಲಪಡಿಸಿದಾಗ ಮಾತ್ರ. ಆದರೆ ಇತ್ತೀಚೆಗಿನ “ಪಂಚಾಯಿತಿಗೊಂದು ಕೆ.ಪಿ.ಎಸ್” ಮತ್ತು “ಮ್ಯಾಗ್ನೆಟ್ ಶಾಲೆ” ಯೋಜನೆಗಳ ಹೆಸರಿನಲ್ಲಿ ಕರ್ನಾಟಕ ಸರ್ಕಾರ ಕೆಲವು ಗ್ರಾಮೀಣ ಶಾಲೆಗಳನ್ನು ವಿಲೀನಗೊಳಿಸುವ ಅಥವಾ ಮುಚ್ಚುವ ಕ್ರಮಕ್ಕೆ ಮುಂದಾಗಿದೆ.
ಈ ಕ್ರಮ ನಿಜವಾಗಿಯೂ ಮಕ್ಕಳ ಹಿತಕ್ಕೋ? ಅಥವಾ ಹಳ್ಳಿಗಳ ಶಿಕ್ಷಣದ ಕುಗ್ಗುವಿಕೆಗೆ ಕಾರಣವೋ? ಎಂಬ ಪ್ರಶ್ನೆ ಉದ್ಭವಿಸಿದೆ.ಸರ್ಕಾರದ ಪ್ರಕಾರ, ಕೆಲವು ಹಳ್ಳಿಗಳ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ, ಶಿಕ್ಷಕರ ಕೊರತೆ ಮತ್ತು ಸೌಲಭ್ಯಗಳ ಅಭಾವ ಇದೆ. ಈ ಸಮಸ್ಯೆಗಳಿಗೆ ಪರಿಹಾರವಾಗಿ ಹೆಚ್ಚಿನ ಸೌಲಭ್ಯಗಳಿರುವ ದೊಡ್ಡ ಶಾಲೆಗಳನ್ನು ಮ್ಯಾಗ್ನೆಟ್ ಶಾಲೆ’ ರೂಪದಲ್ಲಿ ನಿರ್ಮಿಸಿದರೆ, ಗುಣಮಟ್ಟದ ಶಿಕ್ಷಣ ಒದಗಿಸಬಹುದು ಎಂದು ಹೇಳುತ್ತದೆ.
ಈ ದೃಷ್ಟಿಯಿಂದ ನೋಡಿದರೆ ಯೋಜನೆಯ ಗುರಿ ಒಳ್ಳೆಯದಾಗಿದೆ.ಆದರೆ ಗ್ರಾಮೀಣ ಜನರ ನೈಜ ಅನುಭವ ಬೇರೆ ಚಿತ್ರಣವನ್ನು ನೀಡುತ್ತದೆ. ಶಾಲೆ ದೂರವಾದಾಗ, ವಿಶೇಷವಾಗಿ 1 ರಿಂದ 5ನೇ ತರಗತಿಯ ಚಿಕ್ಕಮಕ್ಕಳಿಗೆ ಸಾರಿಗೆ ಸೌಲಭ್ಯವಿಲ್ಲದೇ ಹಾಜರಾಗುವುದು ದುಸ್ತರ.ಶಾಲಾಭಿವೃದ್ಧಿ ಸಮಿತಿಗಳ ಮೂಲಕ ಸಾರಿಗೆ ಸೌಲಭ್ಯ ನೀಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆಯಾದರೂ ಇದು ಕಾರ್ಯರೂಪಕ್ಕೆ ಬರುವುದು ಅನುಮಾನ. ಇದರಿಂದ ಮಕ್ಕಳು ಶಾಲೆಗೆ ಬರದೇ ಹೋದರೂ ಅಚ್ಚರಿಯಿಲ್ಲ. ಶಾಲೆ ಬಿಡುವ ಮಕ್ಕಳ ಪ್ರಮಾಣವೂ ಹೆಚ್ಚುತ್ತದೆ. ಹಳ್ಳಿಯ ಶಾಲೆ ಎಂದರೆ ಕೇವಲ ಕಲಿಕೆಯ ಸ್ಥಳವಲ್ಲ, ಅದು ಹಳ್ಳಿಯ ಸಾಮಾಜಿಕ-ಸಾಂಸ್ಕೃತಿಕ ಚೈತನ್ಯದ ಕೇಂದ್ರವೂ ಆಗಿದೆ.
ಇಂತಹ ಶಾಲೆಗಳು ಮುಚ್ಚಿದರೆ ಹಳ್ಳಿ ತನ್ನ ಜೀವಂತಿಕೆಯ ಒಂದು ಭಾಗವನ್ನು ಕಳೆದುಕೊಳ್ಳುತ್ತದೆ.RTE ಕಾಯ್ದೆ 2009 ಪ್ರಕಾರ 1-5ನೇ ತರಗತಿ ಮಕ್ಕಳಿಗೆ 1 ಕಿಮೀ ಒಳಗೆ ಶಾಲೆ ಇರಬೇಕು. SDMC, ಪೋಷಕರು ಮತ್ತು ಗ್ರಾಮ ಸಭೆಯ ಅಭಿಪ್ರಾಯ ಪಡೆಯದೇ ಶಾಲೆಗಳನ್ನು ವಿಲೀನ ಮಾಡುವುದು ಕಾನೂನುಬದ್ದವೂ ಅಲ್ಲ. ಆದರೆ ಅನೇಕ ಕಡೆ ಈ ನಿಯಮಗಳನ್ನು ಪಾಲಿಸದೇ ವಿಲೀನ ಪ್ರಕ್ರಿಯೆ ನಡೆಯುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇದೆಲ್ಲದರೊಂದಿಗೆ, ಇನ್ನೊಂದು ಗಂಭೀರ ಚಿಂತೆಯೂ ಜನರಲ್ಲಿ ಮೂಡಿದೆ. ಹಳ್ಳಿಯ ಶಾಲೆಗೆ ಅಗತ್ಯ ಸೌಲಭ್ಯ ನೀಡದೇ, ಬದಲಿಗೆ ಅದನ್ನು ಮುಚ್ಚಿದರೆ, ಪೋಷಕರು ಖಾಸಗಿ ಶಾಲೆಗಳತ್ತ ತಿರುಗಿಬಿಡುವ ಪರಿಸ್ಥಿತಿ ಬರುತ್ತಿದೆ. ಇದರಿಂದ ಮ್ಯಾಗ್ನೆಟ್ ಶಾಲೆ ಯೋಜನೆ ಸರ್ಕಾರದ ಶಾಲೆಗಳಿಗಿಂತ ಖಾಸಗಿ ಶಾಲೆಗಳ ಉದ್ದಾರಕ್ಕೆ ಕಾರಣವಾಗುತ್ತಿದೆ ಎಂಬ ಭಾವನೆ ಗಟ್ಟಿ ಆಗುತ್ತಿದೆ.
ಹಳ್ಳಿಯಲ್ಲಿ ಶಾಲೆ ಇಲ್ಲದಾಗ ಬಡವರು ಮತ್ತು ಮಧ್ಯಮ ವರ್ಗದವರು ಪ್ರಾಥಮಿಕ ಶಿಕ್ಷಣದಿಂದಲೇ ವಂಚಿತರಾಗುವ ಭೀತಿ ಇದೆ. ಮುಂದಿನ ದಿನಗಳಲ್ಲಿ ಶಾಲೆಗಳ ಜಾಗದಲ್ಲಿ ಪೊಲೀಸ್ ಕೇಂದ್ರಗಳನ್ನು ಸ್ಥಾಪಿಸುವ ಪರಿಸ್ಥಿತಿಯೂ ಬರಬಹುದು ಎಂಬ ಚಿಂತೆಯೂ ಗ್ರಾಮಸ್ಥರಲ್ಲಿ ಮೂಡಿದೆ. ಈ ಭಯ ಹುಟ್ಟಲು ಪ್ರಮುಖ ಕಾರಣವೇ ಸರ್ಕಾರಿ ಶಾಲೆಗಳ ವಿಲೀನ ಕ್ರಿಯೆ.
ಅದರಂತೆ, ಕೆ.ಪಿ.ಎಸ್ ಮ್ಯಾಗ್ನೆಟ್ ಶಾಲೆ ಯೋಜನೆಗಳ ಗುರಿ ಒಳ್ಳೆಯದಾಗಿದ್ದರೂ, ಜಾರಿಗೆ ತರೋ ವಿಧಾನ, ಸಾರಿಗೆ-ಸುರಕ್ಷತೆ-ಸೌಲಭ್ಯ-ಜನಾಭಿಪ್ರಾಯದ ಕೊರತೆ ಇದ್ದರೆ ಅದು ಗ್ರಾಮೀಣ ವಿದ್ಯಾರ್ಥಿಗಳ ಮೂಲಭೂತ ಹಕ್ಕಿಗೆ ಧಕ್ಕೆ ತರುತ್ತದೆ. ಸಮಸ್ಯೆಗೆ ಪರಿಹಾರವಾಗಿ ಶಾಲೆ ಮುಚ್ಚುವುದು ಯಾವತ್ತೂ ಸಮರ್ಥ ಕ್ರಮವಲ್ಲ.
ಬದಲಾಗಿ ಹಳ್ಳಿಯ ಶಾಲೆಗಳನ್ನೇ ಬಲಪಡಿಸುವುದು, ಶಿಕ್ಷಕರನ್ನು ಹೆಚ್ಚಿಸುವುದು ಮತ್ತು ಸೌಲಭ್ಯ ಒದಗಿಸುವುದು ಸರ್ಕಾರದ ಪ್ರಥಮ ಕರ್ತವ್ಯ.ಸಾರಾಂಶವಾಗಿ ಹೇಳುವುದಾದರೆ, ಹಳ್ಳಿಗಳ ಶಿಕ್ಷಣ ಕುಗ್ಗಿದರೆ ರಾಜ್ಯದ ಭವಿಷ್ಯ ಕುಗ್ಗುತ್ತದೆ. ಅಭಿವೃದ್ಧಿ ಹೆಸರಿನಲ್ಲಿ ಹಳ್ಳಿಯ ಶಾಲೆಗಳನ್ನು ಮುಚ್ಚುವುದಕ್ಕಿಂತ, ಗುಣಮಟ್ಟದ ಶಿಕ್ಷಣವನ್ನು ಹಳ್ಳಿಗಳಲ್ಲೇ ತಲುಪಿಸುವುದು ನಿಜವಾದ ಅಭಿವೃದ್ಧಿಯ ದಾರಿ.
ಹಳ್ಳಿಯ ಶಾಲೆಗಳು ಬಲವಾಗಿ ನಿಂತಾಗ ಮಾತ್ರ ಪ್ರಜಾಪ್ರಭುತ್ವವೂ ಸಮಾಜವೂ ಮತ್ತು ರಾಜ್ಯವೂ ಬಲವಾಗುತ್ತದೆ ಎಂದು ಅರಬಿಳಚಿ ವೀರಾಚಾರ್ ಶಾಲಾಭಿವೃದ್ಧಿ ಸಮನ್ವಯ ವೇದಿಕೆಯ ಶಿವಮೊಗ್ಗದ ಜಿಲ್ಲಾಧ್ಯಕ್ಷರು ವಿವರಿಸಿದ್ದಾರೆ.




