ತುಮಕೂರು, ಕಾರ್ಯಕರ್ತರಿಗೆ ಅಧಿಕಾರ ಕೊಡಿ, ಅವರೇ ನಮಗೆ ಶಕ್ತಿ ತುಂಬಿದರು. ಮುಂದಿನ 2 ವರ್ಷದಲ್ಲಿ ಚುನಾವಣೆ ಇದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಲ್ಲಿ ಸಾಧನಾ ಸಮಾವೇಶದ ವೇದಿಕೆಯಲ್ಲೇ ಮನವಿ ಮಾಡಿದರು.
ತುಮಕೂರಿನಲ್ಲಿ ಮಂಗಳವಾರ ನಡೆದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು “ಕಳೆದ ಮೂರು ವರ್ಷಗಳ ಸಾಧನೆ ಜನರ ಮುಂದಿಡುವ ಉದ್ದೇಶವೇ ಸಾಧನಾ ಸಮಾವೇಶವಾಗಿದೆ. ಕಾರ್ಯಕರ್ತರಿಗೆ ಅಧಿಕಾರ ಕೊಡಬೇಕು ಎಂದು ಸಾಧನಾ ಸಮಾವೇಶದಲ್ಲಿ ಸತೀಶ್ ಜಾರಕಿಹೊಳಿ ಆಗ್ರಹಿಸಿದರು.
ನಮ್ಮ ಮುಂದೆ ಸಾಕಷ್ಟು ಸವಾಲು ಇದೆ, ಸಾಕಷ್ಟು ಕೆಲಸ ಆಗಬೇಕು. ಕಾರ್ಯಕರ್ತರಿಗೆ ಅಧಿಕಾರ ಕೊಡುವ ಕೆಲಸ ಆಗಿಲ್ಲ. ಈ ಬಗ್ಗೆ ಸಿಎಂ, ಡಿಸಿಎಂ ಗಮನ ಹರಿಸಬೇಕು. ಕಾರ್ಯಕರ್ತರಿಗೆ ಅಧಿಕಾರ ಕೊಡುವ ಕೆಲಸ ಆಗಬೇಕು. ಕಾರ್ಯಕರ್ತರಿಂದ ನಮ್ಮ ಸರ್ಕಾರ ಬಂದಿದೆ. ಸಿಎಂ, ಡಿಸಿಎಂ ಹಾಗೂ ಸಚಿವರು ಕಾರ್ಯಕರ್ತರಿಂದಾಗಿದ್ದೇವೆ. ಈ ನಿಟ್ಟಿನಲ್ಲಿ ಸಿಎಂ, ಡಿಸಿಎಂ ಹೆಚ್ಚಿನ ಗಮನ ಕೊಡಬೇಕು. ಎರಡು ವರ್ಷಗಳಲ್ಲಿ ನಾವು ಚುನಾವಣೆಗೆ ಹೋಗಬೇಕಾಗಿದೆ ಎಂದು ನೆನಪಿಸಿದರು.
ಗ್ಯಾರಂಟಿ, ಅಭಿವೃದ್ದಿ ಕಾಮಗಾರಿಯನ್ನು ಸರ್ಕಾರ ಜನರಿಗೆ ನೀಡಿದೆ. ಹಲವು ಸವಾಲು ಎದುರಿಸಿ ಒಳ್ಳೆ ಆಡಳಿತ ನೀಡಲು ಹೆಜ್ಜೆ ಹಾಕಿದೆ. ವಿವಿಧ ಇಲಾಖೆಗಳಿಂದ ಜನಪರ ಕೆಲಸ ಕಾರ್ಯ ಮಾಡುತ್ತಿದ್ದೇವೆ.
ಉಳಿದ 2 ವರ್ಷಗಳಲ್ಲಿ ಜನರ ಆಶೋತ್ತರದತ್ತ ಗಮನ ಹರಿಸಬೇಕು. ಬಾಕಿ ಕಾಮಗಾರಿ ಎರಡು ವರ್ಷಗಳಲ್ಲಿ ಪೂರೈಸುವ ಪ್ರಯತ್ನ ಆಗಬೇಕು ಎಂದರು.
ಸಾಧನಾ ಸಮಾವೇಶದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, “ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಮಾಡುವ ಮಾತನ್ನಾಡಿದ್ದರು. ಅಂಬೇಡ್ಕರ್ ಸಂವಿಧಾನ ಇಲ್ಲಾಂದ್ರೆ ನಾನು ಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ ಹಾಗೂ ಈ ಕಾರ್ಯಕ್ರಮ ನಡೆಯಲು ಆಗುತ್ತಿರಲಿಲ್ಲ” ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
‘ಪಂಚ ಗ್ಯಾರಂಟಿ ಭರವಸೆಯನ್ನು ಸರ್ಕಾರ ಈಡೇರಿಸಿದೆ.ಗ್ಯಾರಂಟಿಯಿಂದ ಸರ್ಕಾರ ದಿವಾಳಿ ಎಂದು ಬಿಜೆಪಿ ಆರೋಪ ಮಾಡಿದ್ದರು. ಆದರೆ, ಎಲ್ಲಾ ಜಿಲ್ಲೆಗಳಲ್ಲಿ ಅಭಿವೃದ್ದಿ ಕಾರ್ಯ ನಡೆಯುತ್ತಿದೆ.
ಮೈಸೂರು, ಬಳ್ಳಾರಿ, ವಿಜಯನಗರ ಸೇರಿದಂತೆ 7 ಜಿಲ್ಲೆಗಳಲ್ಲಿ 25,000 ಕೋಟಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ದೇವೆ. ನಮ್ಮ ಸರ್ಕಾರ ಬಂದ ಬಳಿಕ 80,000 ಮನೆಗಳನ್ನು ನೀಡಿದ್ದೇವೆ’ ಎಂದು ವಸತಿ ಇಲಾಖೆಯ ಕೆಲಸ ಕಾರ್ಯಗಳನ್ನು ಸಮಾವೇಶದಲ್ಲಿ ಜಮೀರ್ ತೆರೆದಿಟ್ಟರು.
ಸಚಿವ ಈಶ್ವರ್ ಖಂಡ್ರೆ ಮಾತನಾಡಿ, “ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನ ಮಾಡಿದೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಸಾಧನಾ ಸಮಾವೇಶದಲ್ಲಿ ಸೇರಿದ ಜನರೇ ಇದಕ್ಕೆ ಸಾಕ್ಷಿ. ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ.
ಗ್ಯಾರಂಟಿ ಅನುಷ್ಠಾನದಿಂದ 1 ಕೋಟಿಗಿಂತ ಹೆಚ್ಚು ಬಡವರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ. ಹೆಚ್ಚಿನ ತಲಾ ಆದಾಯ ಇರುವ ರಾಜ್ಯ ಕರ್ನಾಟಕವಾಗಿದೆ. ಇದರ ಕೀರ್ತಿ ಸಿದ್ದರಾಮಯ್ಯ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.
ಗ್ಯಾರಂಟಿ ಬಗ್ಗೆ ಬಿಜೆಪಿ ಲೇವಡಿ ಮಾಡಿತ್ತು.ಆದರೆ, ನಮ್ಮ ಗ್ಯಾರಂಟಿಗಳನ್ನು ಹೈಜಾಕ್ ಮಾಡಲಾಗಿದೆ. ಎಲ್ಲಾ ಚುನಾವಣೆಗಳಲ್ಲಿ ಗ್ಯಾರಂಟಿ ಕದ್ದು ಘೋಷಣೆ ಮಾಡಲಾಗಿದೆ.
ಈ ಮೂಲಕ ಬಿಜೆಪಿ ತನ್ನ ಜನಪ್ರಿಯತೆ ಹೆಚ್ಚಿಸಲು ಪ್ರಯತ್ನ ಮಾಡಿದೆ. ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಕೊಟ್ಟ ಭರವಸೆ ಈಡೇರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.

