ಬೆಂಗಳೂರು, ನಗರದ ಪ್ರಸಿದ್ಧ ಲುಲು ಮಾಲ್ ಮುಂದೆ ಕೆಎಸ್ಆರ್ಟಿಸಿ ಬಸ್ಸೊಂದು ಹೊತ್ತಿ ಉರಿದ ಘಟನೆ ಗುರುವಾರ ರಾತ್ರಿ ನಡೆದಿದೆ.ರಾತ್ರಿ 10:15ಕ್ಕೆ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಶಿವಮೊಗ್ಗಕ್ಕೆ ಕರ್ನಾಟಕ ಸಾರಿಗೆ ಬಸ್ ಹೊರಟಿತ್ತು. ಲುಲು ಮಾಲ್ ಬಳಿ ರಾತ್ರಿ 10:20 ತಲುಪುವಾಗ ಬಸ್ಸಿನ ಕೆಳ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಈ ದೃಶ್ಯ ನೋಡಿದ ಜನರು ಚಾಲಕನಿಗೆ ತಿಳಿಸಿದ್ದಾರೆ. ಚಾಲಕ ಕೂಡಲೇ ಬಸ್ಸನ್ನು ನಿಲ್ಲಿಸಿದ್ದು ಪ್ರಯಾಣಿಕರು ಕೆಳಗೆ ಇಳಿದಿದ್ದಾರೆ.
ಜನರು ಇಳಿದ ಕೆಲ ಕ್ಷಣಗಳಲ್ಲಿ ಬಸ್ ಧಗಧಗಿಸಿದೆ. ಪರಿಣಾಮ ಮೆಜೆಸ್ಟಿಕ್ನಿಂದ ಲುಲುಮಾಲ್ಗೆ ಹೋಗುವ ರಸ್ತೆಗಳಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿತ್ತು.
ಸ್ಥಳಕ್ಕೆ ಅಗ್ನಿಶಾಮಕದಳದ ವಾಹನ ಆಗಮಿಸಿದ್ದು ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ.



