ಶಿವಮೊಗ್ಗ, ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪಟ್ಟಣದಲ್ಲಿ ಇಂದು ಆಲಿಕಲ್ಲು, ಗುಡುಗು ಸಹಿತ ಸುರಿದ ಭಾರೀ ಮಳೆಯ ಪರಿಣಾಮವಾಗಿ ಟಾಟಾ ಏಸ್ ಲಗೇಜ್ ವಾಹನದ ಮೇಲೆ ತೆಂಗಿನಮರ ಉರುಳಿ ಬಿದ್ದ ಘಟನೆ ಸಂಭವಿಸಿದೆ.
ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸದೇ ಭಾರಿ ಅನಾಹುತ ತಪ್ಪಿದಂತಾಗಿದೆ.ಶಬರೀಶನಗರ ನಿವಾಸಿ ಗುಂಡಣ್ಣ (ಗಂಗಾಧರ್) ಅವರಿಗೆ ಸೇರಿದ ಟಾಟಾ ಏಸ್ ವಾಹನವನ್ನು ಮನೆ ಸಮೀಪ ನಿಲ್ಲಿಸಲಾಗಿತ್ತು.
ಏಕಾಏಕಿ ಶುರುವಾದ ಭಾರೀ ಮಳೆ ಮತ್ತು ಗಾಳಿ ಮಿಶ್ರಿತ ಆಲಿಕಲ್ಲು ಸುರಿಮಳೆಯ ಪರಿಣಾಮವಾಗಿ ಹತ್ತಿರದಲ್ಲಿದ್ದ ತೆಂಗಿನಮರ ಬೇರು ಸಮೇತ ಉರುಳಿ ಬಿದ್ದು ನೇರವಾಗಿ ವಾಹನದ ಮೇಲೆ ಬಿದ್ದಿದೆ. ಪರಿಣಾಮ ವಾಹನ ಸಂಪೂರ್ಣವಾಗಿ ಜಖಂಗೊಂಡಿದ್ದು, ವಾಹನದ ಮೇಲ್ಭಾಗ ಗಂಭೀರ ಹಾನಿಗೊಳಗಾಗಿದೆ.
ಘಟನೆಯ ವೇಳೆ ಯಾರೂ ವಾಹನದ ಒಳಗೆ ಇಲ್ಲದಿರುವುದು ದೊಡ್ಡ ಅಪಾಯವನ್ನು ತಪ್ಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಾಳಿ ಮಳೆಯ ತೀವ್ರತೆಗೆ ಕೆಲಕಾಲ ಜನರಲ್ಲಿ ಆತಂಕ ಉಂಟಾಗಿತ್ತು.
ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಪಿಎಸ್ಐ ರಾಜು ರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರವನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಸ್ಥಳೀಯರ ಸಹಾಯದಿಂದ ಕ್ರಮ ಕೈಗೊಳ್ಳಲಾಗಿದೆ.



