ಬೆಂಗಳೂರು, ಸಿಲಿಂಡರ್ ಬೆಲೆಯನ್ನು 60 ರೂ. ಏರಿಕೆ ಮಾಡುವ ಮೂಲಕ ಕೇಂದ್ರದ ಮೋದಿ ಸರ್ಕಾರ, ವಿಶ್ವ ಮಹಿಳಾ ದಿನದಂದೇ ಮಹಿಳೆಯರಿಗೆ ಅಘಾತಕಾರಿ ‘ಕೊಡುಗೆ’ ನೀಡಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಭಾನುವಾರ ಟೀಕಿಸಿದ್ದಾರೆ.
ಸಿಲಿಂಡರ್ ದರ ಕುರಿತು ಮಾತನಾಡಿರುವ ಅವರು, ಸಿಲಿಂಡರ್ ಬೆಲೆಯನ್ನು ರೂ.60 ಏರಿಕೆ ಮಾಡುವ ಮೂಲಕ ಕೇಂದ್ರದ ಮೋದಿ ಸರ್ಕಾರ, ವಿಶ್ವ ಮಹಿಳಾ ದಿನದಂದೇ ಮಹಿಳೆಯರಿಗೆ ಅಘಾತಕಾರಿ ‘ಕೊಡುಗೆ’ ನೀಡಿದೆ. ದೇಶದ ಸುಮಾರು 30 ಕೋಟಿ ಕುಟುಂಬಗಳ ಮೇಲೆ ಈ ನಿರ್ಧಾರ ನೇರ ಪರಿಣಾಮ ಬೀರಲಿದೆ ಎಂದು ಹೇಳಿದರು.
ಸಣ್ಣ ಪುಟ್ಟ ವಿಷಯಗಳಿಗೂ ನಾಟಕೀಯವಾಗಿ ಮಾಧ್ಯಮಗಳ ಮುಂದೆ ಬರುವ ರಾಜ್ಯದ ಬಿಜೆಪಿ ‘ಖಾಲಿ ಟ್ರಂಕ್’ ಸಂಸದರು, ಜನಸಾಮಾನ್ಯರ ಈ ಸಂಕಷ್ಟದ ಬಗ್ಗೆ ಯಾಕೆ ಮೌನವಾಗಿದ್ದಾರೆ? ಈ ದರ ಏರಿಕೆ ವಿರುದ್ಧ ನಿಮ್ಮ ಹೋರಾಟ ಎಲ್ಲಿ? ನಿಮ್ಮ ಅಭಿಪ್ರಾಯ ಏನು? ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಈ ದೇಶದ ‘ಸಹೋದರಿಯರ’ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಕೂಡಲೇ ಈ ಸಿಲಿಂಡರ್ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.



